ನವದೆಹಲಿ:ಶುಕ್ರವಾರ ಇಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಜನತಾ ದಳ (ಸಂಯುಕ್ತ) ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಹಾಲಿ ಅಧ್ಯಕ್ಷ ಲಾಲನ್ ಸಿಂಗ್ ರಾಜೀನಾಮೆ ನೀಡಿದ್ದರು ಎಂದು ಪಕ್ಷದ ನಾಯಕ ಕೆ.ಸಿ.ತ್ಯಾಗಿ ತಿಳಿಸಿದ್ದಾರೆ.
2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ನಿತೀಶ್ ಕುಮಾರ್ ಪಕ್ಷದ ಪ್ರಮುಖ ಮುಖವಾಗಿರುವುದರಿಂದ ಸಂಘಟನೆಯ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಪಕ್ಷದೊಳಗೆ ಹೆಚ್ಚಿನ ಪ್ರಮುಖ ನಾಯಕರು ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ. ಜೆಡಿಯು ಇಂಡಿಯಾ ಒಕ್ಕೂಟದ ಭಾಗವಾಗಿದೆ. ಸಿಂಗ್ ನಾಯಕತ್ವ ಶೈಲಿಯನ್ನು ಪಕ್ಷದೊಳಗಿನ ಹಲವಾರು ನಾಯಕರು ಟೀಕಿಸಿದ್ದರು.
ನವದೆಹಲಿಯಲ್ಲಿ ನಡೆದ ಎರಡು ದಿನಗಳ ಸಭೆಯಲ್ಲಿ ನಿತೀಶ್ ಕುಮಾರ್ ಸಮ್ಮುಖದಲ್ಲಿ ಲಲನ್ ಸಿಂಗ್ ಈ ನಿರ್ಧಾರ ತೆಗೆದುಕೊಂಡರು. ಸಭೆಯನ್ನುದ್ದೇಶಿಸಿ ಮಾತನಾಡಿರುವ ಸಿಂಗ್, ''ನಾನು ನನ್ನ ಸ್ವಂತ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬ್ಯುಸಿಯಾಗಿರುವ ಕಾರಣ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನೂತನ ಅಧ್ಯಕ್ಷರಾಗಿ ನಿತೀಶ್ ಕುಮಾರ್ ಹೆಸರನ್ನು ಪ್ರಸ್ತಾಪಿಸುತ್ತೇನೆ'' ಎಂದಿದ್ದಾರೆ.
ಹಣಕಾಸು ಸಚಿವ ಮತ್ತು ಜೆಡಿಯು ನಾಯಕ ವಿಜಯ್ ಕುಮಾರ್ ಚೌಧರಿ ಪ್ರತಿಕ್ರಿಯಿಸಿ, "ಲಲನ್ ಸಿಂಗ್ ರಾಜೀನಾಮೆ ನೀಡಿದ್ದಾರೆ ಮತ್ತು ಅದನ್ನು ಪಕ್ಷ ಅಂಗೀಕರಿಸಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ:ಭಗವದ್ಗೀತೆ ಶ್ಲೋಕದ ತಪ್ಪಾದ ಅನುವಾದಕ್ಕೆ ಕ್ಷಮೆಯಾಚಿಸಿದ ಅಸ್ಸೋಂ ಸಿಎಂ