ನವದೆಹಲಿ:ಪತ್ರಕರ್ತರು, ಪ್ರತಿಪಕ್ಷಗಳ ನಾಯಕರು ಹಾಗೂ ಕೆಲ ಕೇಂದ್ರ ಸಚಿವರ ಫೋನ್ಗಳನ್ನ ಕದ್ದಾಲಿಸಲಾಗಿದೆ. ಹಾಗೂ ಪೆಗಾಸಸ್ ಬೇಹುಗಾರಿಕಾ ಆ್ಯಪ್ ನಿಂದ ನಿಗಾ ಇಡಲಾಗಿದೆ ಎಂಬ ಸುದ್ದಿ ಈಗ ಸಂಸತ್ನ ಉಭಯ ಸದನಗಳ ಕಲಾಪಗಳನ್ನೇ ಬಲಿ ತೆಗೆದುಕೊಂಡಿದೆ.
ಈ ನಡುವೆ ಈ ಪ್ರಕರಣದ ಬಗ್ಗೆ ನಿಜವಾಗಿಯೂ ತನಿಖೆ ಮಾಡಬೇಕಿದೆ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಒತ್ತಾಯಿಸಿದ್ದಾರೆ. ಈ ಮೂಲಕ ಎನ್ಡಿಎ ಮಿತ್ರ ಪಕ್ಷದ ಸಿಎಂ ಒಬ್ಬರು ಪೆಗಾಸಸ್ ತನಿಖೆಗೆ ಒತ್ತಾಯಿಸುವ ಮೂಲಕ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದ್ದಾರೆ. ಬಿಹಾರ್ ಸಿಎಂ ಅವರ ಈ ಒತ್ತಾಯ ಪ್ರತಿಪಕ್ಷಗಳ ಒತ್ತಾಯಕ್ಕೆ ಮತ್ತಷ್ಟು ಬಲ ನೀಡಿದಂತಾಗಿದೆ.
ಇಕ್ಕಟ್ಟಿಗೆ ಸಿಲುಕಿಸುತ್ತಾ ನಿತೀಶ್ ಹೇಳಿಕೆ
ಪೆಗಾಸಸ್ ಸ್ಪೈವೇರ್ ಬಗ್ಗೆ ಮಾತನಾಡಿರುವ ಬಿಹಾರ ಸಿಎಂ ನಿತೀಶ್ ಕುಮಾರ್, ನಿಜವಾಗಿಯೂ ಈ ಬಗ್ಗೆ ತನಿಖೆ ನಡೆಸಬೇಕಿದೆ. ನಾವು ಟೆಲಿಫೋನ್ ಕದ್ದಾಲಿಕೆ ಬಗ್ಗೆ ಬಹಳ ದಿನಗಳಿಂದ ಕೇಳುತ್ತಿದ್ದೇವೆ. ಈ ಬಗ್ಗೆ ಸಂಸತ್ನಲ್ಲಿ ಚರ್ಚೆ ಆಗಬೇಕಾದ ಅಗತ್ಯತೆ ಇದೆ. ಈ ಬಗ್ಗೆ ರಾಷ್ಟ್ರದ ಜನತೆಗೂ ಗೊತ್ತಾಗಬೇಕಿದೆ ಎಂದಿದ್ದಾರೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಕೋವಿಡ್ನ ಈ ಸಂದರ್ಭದಲ್ಲಿ ಸಂಸತ್ ಅಧಿವೇಶನ ನಡೆಯುತ್ತಿದೆ. ಯಾವುದೇ ವಿಷಯಗಳು ಚರ್ಚೆಗೆ ಬಂದಿಲ್ಲ. ಪೆಗಾಸಸ್ ವಿಷಯವಾಗಿ ಪ್ರತಿಪಕ್ಷಗಳು ಚರ್ಚೆಗೆ ಪಟ್ಟು ಹಿಡಿದಿವೆ. ಕೇಂದ್ರ ಸರ್ಕಾರ ಈ ಬಗ್ಗೆ ಮಾಹಿತಿ ಖಾತೆ ಸಚಿವರು ಸ್ಪಷ್ಟನೆ ನೀಡಿದ್ದಾರೆ ಎನ್ನುತ್ತಿದೆ.
ಈ ಮಧ್ಯೆ ನಾಳೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷಗಳ ಮಹತ್ವದ ಸಭೆ ನಡೆಯುತ್ತಿದೆ. ಅತ್ತ ಆಗಸ್ಟ್ 4ರಂದು ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ.