ಪಾಟ್ನಾ(ಬಿಹಾರ): ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಮೈತ್ರಿ ಸರ್ಕಾರ ಮುರಿದು ಬಿದ್ದಿದೆ. ಇಂದು ಸಂಜೆ ರಾಜ್ಯಪಾಲ ಫಾಗು ಚೌಹಾಣ್ ಅವರನ್ನು ಭೇಟಿ ಮಾಡಿರುವ ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಇದರ ಬೆನ್ನಲ್ಲೇ ಹೊಸ ಸರ್ಕಾರ ರಚನೆ ಮಾಡುವ ಕಸರತ್ತು ಜೋರಾಗಿದೆ.
ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಜೊತೆ ರಾಜಭವನಕ್ಕೆ ತೆರಳಿದ ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, "ಎನ್‌ಡಿಎ ಸರ್ಕಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಇಂದು ಬೆಳಗ್ಗೆ ನಡೆದ ಸಭೆಯಲ್ಲಿ ಎಲ್ಲ ಸಂಸದರು, ಶಾಸಕರು ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರು" ಎಂದರು.
ತೇಜಸ್ವಿ ಯಾದವ್ ಜೊತೆ ಕೆಲ ಹೊತ್ತು ಚರ್ಚಿಸಿದ ನಿತೀಶ್ ಕುಮಾರ್ ಇದೀಗ ರಾಬ್ರಿ ದೇವಿ ಅವರನ್ನು ಭೇಟಿಗೆ ತೆರಳಿದ್ದಾರೆ. ಆರ್ಜೆಡಿ ಈಗಾಗಲೇ ನಿತೀಶ್ ಕುಮಾರ್ ಅವರಿಗೆ ಸಂಪೂರ್ಣ ಬೆಂಬಲ ಸೂಚಿಸಿದೆ. ಹೀಗಾಗಿ, ರಾಜ್ಯದಲ್ಲಿ ಜೆಡಿಯು+ಆರ್ಜೆಡಿ+ಎಡಪಕ್ಷಗಳ ನೇತೃತ್ವದ ಸರ್ಕಾರ ರಚನೆಗೊಳ್ಳಲಿದೆ. ಬಿಹಾರದಲ್ಲಿ ಅತಿದೊಡ್ಡ ಪಕ್ಷವಾಗಿರುವ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರಿಗೆ ಉಪಮುಖ್ಯಮಂತ್ರಿ ಹಾಗೂ ಗೃಹ ಖಾತೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದ್ದು, ನಿತೀಶ್ ಕುಮಾರ್ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.