ಪಾಟ್ನಾ(ಬಿಹಾರ):ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡು ಆರ್‌ಜೆಡಿ, ಕಾಂಗ್ರೆಸ್ ಜೊತೆ ಕೈ ಜೋಡಿಸಿರುವ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದಿದ್ದಾರೆ. ಬಳಿಕ ಮಾತನಾಡಿರುವ ಅವರು, 2024ರ ಲೋಕಸಭೆಯಲ್ಲಿ ಒಟ್ಟಿಗೆ ಹೋರಾಡುವ ಮಂತ್ರ ಜಪಿಸಿದರು.
2019ರ ವಿಧಾನಸಭೆ ಚುನಾವಣೆಯ ಬೆನ್ನಲ್ಲೇ ಎನ್ಡಿಎ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದ ನಿತೀಶ್ ಕುಮಾರ್ ಕಳೆದ ಕೆಲ ದಿನಗಳ ಹಿಂದೆ ಬಿಜೆಪಿಗೆ ಕೈ ಕೊಟ್ಟು ಆರ್‌ಜೆಡಿ ಸಾರಥ್ಯದ ಮಹಾಘಟಬಂಧನ್ ಮೈತ್ರಿಕೂಟದ ಕೈ ಹಿಡಿದು ಮತ್ತೆ ಸಿಎಂ ಆಗಿದ್ದಾರೆ. ವಿಧಾನಸಭೆಯಲ್ಲಿಂದು ವಿಶ್ವಾಸಮತಯಾಚನೆ ವೇಳೆ ಬಿಜೆಪಿ ಶಾಸಕರು ಸದನದಿಂದ ಹೊರನಡೆದರು.
ಸಿಎಂ ನಿತೀಶ್ ಕುಮಾರ್ ಹೇಳಿದ್ದೇನು?: "ಆರ್‌ಜೆಡಿ ಮತ್ತು ಜೆಡಿಯು ರಾಜ್ಯದ ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡುವ ಪ್ರತಿಜ್ಞೆ ತೆಗೆದುಕೊಂಡಿದ್ದೇವೆ. ನಮ್ಮ ಪಕ್ಷಗಳ ರಾಷ್ಟ್ರೀಯ ನಾಯಕರು ನನ್ನ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಒಟ್ಟಿಗೆ ಹೋರಾಡಲಿದ್ದೇವೆ" ಎಂದು ನಿತೀಶ್ ಕುಮಾರ್ ಹೇಳಿದರು. "2017ರಲ್ಲಿ ಪಾಟ್ನಾ ವಿಶ್ವವಿದ್ಯಾಲಯಕ್ಕೆ ಕೇಂದ್ರೀಯ ಸ್ಥಾನಮಾನದ ಬೇಡಿಕೆ ಇಟ್ಟಾಗ ಯಾರೂ ಅದರತ್ತ ಗಮನ ಹರಿಸಲಿಲ್ಲ. ಆದರೆ, ಇದೀಗ ನಿಮ್ಮ ಬೇಳೆ ಬೇಯಿಸಿಕೊಳ್ಳಲು ಆ ಕೆಲಸ ಮಾಡಲು ಮುಂದಾಗಿದ್ದೀರಿ" ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.