ಪಾಟ್ನಾ (ಬಿಹಾರ):ಬಿಹಾರದಲ್ಲಿ ಬಿಜೆಪಿ ಮೈತ್ರಿ ಮುರಿದುಕೊಂಡಿರುವ ಜೆಡಿಯು, ಹಳೆಯ ಪಾಲುದಾರ ಲಾಲು ಪ್ರಸಾದ್ ಯಾದವ್ರ ಆರ್‌ಜೆಡಿ, ಕಾಂಗ್ರೆಸ್, ಇತರ ಪಕ್ಷಗಳ ಜೊತೆಗೂಡಿ ಮಹಾಘಟಬಂಧನ್ ಸರ್ಕಾರ ರಚನೆಗೆ ಸಜ್ಜಾಗಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ, ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಬಿಜೆಪಿ ಜೊತೆಗಿನ ಮೈತ್ರಿ ಕಡಿದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಆರ್‌ಜೆಡಿ, ಕಾಂಗ್ರೆಸ್ ಸೇರಿದಂತೆ 165 ಶಾಸಕರ ಪಟ್ಟಿಯನ್ನು ರಾಜ್ಯಪಾಲ ಫಾಗು ಚೌಹಾಣ್ರಿಗೆ ನೀಡಿ ಹೊಸ ಸರ್ಕಾರ ರಚನೆಗೆ ಅವಕಾಶ ಕೋರಿದ್ದರು. ಇದಕ್ಕೆ ಸಮ್ಮತಿಸಿದ ರಾಜ್ಯಪಾಲರು ಇಂದು (ಬುಧವಾರ) ಸರ್ಕಾರ ರಚನೆಗೆ ಸೂಚಿಸಿದ್ದರು.
2 ಗಂಟೆಗೆ ಗೌಪ್ಯತೆ ಸ್ವೀಕಾರ:ಮಹಾಘಟಬಂಧನ್ ಸರ್ಕಾರದ ಸಿಎಂ ಆಗಿ ನಿತೀಶ್ ಕುಮಾರ್ ಇಂದು ಮಧ್ಯಾಹ್ನ 2 ಗಂಟೆಗೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ಪಡೆಯಲಿದ್ದಾರೆ. ಅಲ್ಲದೇ, ಇವರ ಜೊತೆಗೆ ಆರು ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ದೃಢಪಟ್ಟಿಲ್ಲವಾದರೂ ಸಾಧ್ಯತೆಗಳು ಅಲ್ಲಗಳೆಯುವಂತಿಲ್ಲ.
ಬಿಜೆಪಿ ಸಚಿವ ಸ್ಥಾನಗಳು ಹಂಚಿಕೆ:ಜೆಡಿಯು ಜೊತೆಗಿನ ಮೈತ್ರಿ ವೇಳೆ ಬಿಜೆಪಿ ಹೊಂದಿದ್ದ ಸಚಿವ ಸ್ಥಾನಗಳನ್ನು ಹೊಸ ಮಿತ್ರರಿಗೆ ಹಂಚಿಕೆ ಮಾಡಲಾಗುತ್ತಿದೆ. ಸಿಎಂ ಆಗಲಿರುವ ನಿತೀಶ್ ಕುಮಾರ್ ಗೃಹ ಖಾತೆಯನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲಿದ್ದಾರೆ. ಆರ್‌ಜೆಡಿಗೆ ವಿಧಾನಸಭೆ ಸ್ಪೀಕರ್ ಹುದ್ದೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
1:4 ರ ಅನುಪಾತದಲ್ಲಿ ಹಂಚಿಕೆ:ನಿತೀಶ್ ಕುಮಾರ್ ಅವರು 1:4 ಅನುಪಾತದಲ್ಲಿ ಖಾತೆಗಳನ್ನು ಹಂಚಿಕೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ನಾಲ್ಕು ಶಾಸಕರಿಗೆ ಒಂದು ಸಚಿವ ಸ್ಥಾನ ನೀಡಲಾಗುತ್ತದೆ. ಮಹಾಘಟಬಂಧನ್‌ನಲ್ಲಿ 7 ಮೈತ್ರಿ ಪಾಲುದಾರರು ಇರುವುದರಿಂದ ಅನುಪಾತ 1:5 ಕ್ಕೆ ಹೆಚ್ಚುವ ಸಾಧ್ಯತೆಯೂ ಇದೆ.