ಪಾಟ್ನಾ(ಬಿಹಾರ):ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಧಾನಮಂತ್ರಿ ಹುದ್ದೆಯ ರೇಸ್‌ನಲ್ಲಿ ಇಲ್ಲ. ಆದರೂ ಪ್ರಧಾನಿ ಆಗುವ ಎಲ್ಲಾ ಅರ್ಹತೆಗಳು ಇರುವವರಲ್ಲಿ ಅವರೂ ಒಬ್ಬರು ಎಂದು ಜಾತ್ಯತೀತ ಜನತಾ ದಳ(ಸಂಯುಕ್ತ) ಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರ ಕೆ.ಸಿ.ತ್ಯಾಗಿ ಹೇಳಿದ್ದಾರೆ.
ಪಕ್ಷದ ರಾಷ್ಟ್ರೀಯ ಮಂಡಳಿ ಸಭೆ ಬಳಿಕ ನಿನ್ನೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಬಿಜೆಪಿಯೊಂದಿಗೆ ಜೆಡಿಯು ಮೈತ್ರಿ ಮಾಡಿಕೊಂಡು ಅಧಿಕಾರ ಹಂಚಿಕೊಂಡಿದೆ. ನಿತೀಶ್ ಕುಮಾರ್ ಪ್ರಧಾನಿ ಹುದ್ದೆಯ ಅಭ್ಯರ್ಥಿ ಅಲ್ಲ. ಎನ್‌ಡಿಎನಲ್ಲಿ ಅತ್ಯಂತ ನಂಬಿಕಸ್ಥ ಸದಸ್ಯ ಪಕ್ಷ ಜೆಡಿಯು. ಪ್ರಧಾನಿ ನರೇಂದ್ರ ಮೋದಿ ಅವರು ಮೈತ್ರಿಯ ನಾಯಕರಾಗಿದ್ದಾರೆ. ಆದರೆ ಖಂಡಿತವಾಗಿಯೂ ನಿತೀಶ್ ಪ್ರಧಾನಿ ಹುದ್ದೆಯ ವ್ಯಕ್ತಿ ಎಂದರು.
ತ್ಯಾಗಿ ಹೇಳಿಕೆ ನಿರಾಕರಿಸಿದ ನಿತೀಶ್
ನಾವು ಎನ್‌ಡಿಎ ಮೈತ್ರಿಯಲ್ಲಿದ್ದೇವೆ. ಮೈತ್ರಿಯನ್ನು ದೃಢವಾಗಿ ಬೆಂಬಲಿಸಿದ್ದೇವೆ. ಹಲವು ಸಮಸ್ಯೆಗಳನ್ನು ಎನ್‌ಡಿಎ ಸಮನ್ವಯ ಸಮಿತಿ ಬಗೆಹರಿಸಲಿದೆ. ಸಮನ್ವಯ ಸಮಿತಿ ರಚಿಸಿದ ಬಳಿಕ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಹಲವು ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.
ಕೇಂದ್ರ ಹಾಗೂ ರಾಜ್ಯಮಟ್ಟದಲ್ಲಿ ಸುಗಮವಾಗಿ ಕೆಲಸಗಳು ನಡೆಯಲು ಅಂತಹದ್ದೇ ಸಮಿತಿ ರಚಿಸಿದರೆ ಒಳ್ಳೆಯದು. ಇದರಿಂದ ಮೈತ್ರಿ ನಾಯಕರು ನೀಡುವ ಅನಗತ್ಯ ಹೇಳಿಕೆಗಳು ನಿಲ್ಲುತ್ತವೆ ಎಂದು ಹೇಳಿದ್ದಾರೆ. 2022ರಲ್ಲಿ ನಡೆಯಲಿರುವ ಉತ್ತರಪ್ರದೇಶ ಹಾಗೂ ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು ಸ್ಪರ್ಧಿಸಲಿದೆ ಎಂದು ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. 2017ರ ಯುಪಿ ಚುನಾವಣೆಯಲ್ಲಿ ಜೆಡಿಯು ಸ್ಪರ್ಧೆ ಮಾಡಿರಲಿಲ್ಲ.
ಇದನ್ನೂ ಓದಿ: ದೇಶಾದ್ಯಂತ ಜಾತಿ ಗಣತಿಗೆ ಆಗ್ರಹ: ಬಿಹಾರ ಸಿಎಂ ನೇತೃತ್ವದ ನಿಯೋಗದಿಂದ ಪ್ರಧಾನಿ ಭೇಟಿ