ನವದೆಹಲಿ:ಮಹಾಮಾರಿ ಕೊರೊನಾ ವೈರಸ್ ಸಂದರ್ಭದಲ್ಲಿ ಲಕ್ಷಾಂತರ ಜನರು ಕೆಲಸ ಕಳೆದುಕೊಂಡು ಇನ್ನಿಲ್ಲದ ತೊಂದರೆ ಅನುಭವಿಸಿದ್ದಾರೆ. ಅನೇಕರು ಒಂದು ಹೊತ್ತಿನ ಊಟಕ್ಕೂ ಪರದಾಡಿರುವ ಅನೇಕ ಘಟನೆಗಳಿವೆ. ಆದರೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ಸಂದರ್ಭದಲ್ಲಿ ಯೂಟ್ಯೂಬ್ನಿಂದ ಪ್ರತಿ ತಿಂಗಳು 4 ಲಕ್ಷ ರೂ. ಸಂಪಾದನೆ ಮಾಡಿದ್ದಾರೆ.
ದೆಹಲಿ-ಮುಂಬೈ ಎಕ್ಸ್ಪ್ರೆಸ್ ವೇ ಯೋಜನೆಯ ಪ್ರಗತಿ ಪರಿಶೀಲನೆಗೆ ತೆರಳಿದ್ದ ಸಂದರ್ಭದಲ್ಲಿ ಹರಿಯಾಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿರುವ ಕೇಂದ್ರ ಸಚಿವರು, ಕೋವಿಡ್ ಸಂದರ್ಭದಲ್ಲಿನ ಸಮಯವನ್ನು ಯಾವ ರೀತಿಯಾಗಿ ಸದುಪಯೋಗ ಪಡಿಸಿಕೊಂಡಿದ್ದರು ಎಂಬುದರ ಬಗ್ಗೆ ಹೇಳಿಕೊಂಡರು.
ಕೊರೊನಾ ಸಂದರ್ಭದಲ್ಲಿ ಮನೆಯಲ್ಲಿ ಅಡುಗೆ ಮಾಡುವುದು ಹಾಗೂ ವಿಡಿಯೋ ಕಾನ್ಪರೆನ್ಸ್ ಮೂಲಕ ಉಪನ್ಯಾಸ ನೀಡುವ ಕೆಲಸ ಮಾಡುತ್ತಿದ್ದೆ. ಆನ್ಲೈನ್ ಉಪನ್ಯಾಸಗಳನ್ನು ಯೂಟ್ಯೂಬ್ನಲ್ಲಿ ಶೇರ್ ಮಾಡಲು ಶುರು ಮಾಡಿದ್ದರಿಂದ ಅದಕ್ಕೆ ಪ್ರೇಕ್ಷಕರಿಂದ ಭಾರಿ ಬೆಂಬಲ ವ್ಯಕ್ತವಾಯಿತು. ಹೀಗಾಗಿ ನಾನು ಪ್ರತಿ ತಿಂಗಳು 4 ಲಕ್ಷ ರೂಪಾಯಿ ಗಳಿಕೆ ಮಾಡಿದ್ದೇನೆ ಎಂದು ಹೇಳಿದರು.