ಪುಣೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಬಾರಾಮತಿ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ದೇಶದ ಪ್ರತಿಯೊಂದು ಪ್ರದೇಶದಲ್ಲೂ ತನ್ನ ಸಂಘಟನೆ ಬಲಪಡಿಸುವತ್ತ ಗಮನ ಹರಿಸುತ್ತಿದೆ. ನಾನು ಬಾರಾಮತಿಗೆ ಬಂದಿರುವುದು ಬಿಜೆಪಿಯ ನೆಲೆ ಬಲಪಡಿಸಲು, ಯಾವುದೇ ಕುಟುಂಬವನ್ನು ಗುರಿಯಾಗಿಸಲು ಅಲ್ಲ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2024ರ ಚುನಾವಣೆಯಲ್ಲಿ, ವೇದಾಂತ - ಫಾಕ್ಸ್‌ಕಾನ್ ಸೆಮಿಕಂಡಕ್ಟರ್ ಸ್ಥಾವರವನ್ನು ರಾಜ್ಯದಿಂದ ಗುಜರಾತ್‌ಗೆ ಸ್ಥಳಾಂತರಿಸುವ ಬಗ್ಗೆ "ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ" ಎಂದು ಮಹಾರಾಷ್ಟ್ರದ ವಿರೋಧ ಪಕ್ಷಗಳನ್ನು ಟೀಕಿಸಿದರು ಮತ್ತು ತಮ್ಮ ಆಡಳಿತದಲ್ಲಿ ಐದು ದೊಡ್ಡ ಯೋಜನೆಗಳಿಗೆ ಅಡೆತಡೆಗಳನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.
ಮೊಸಳೆ ಕಣ್ಣೀರು ಸುರಿಸುತ್ತಿದ್ದೀರಿ:ಮಹಾರಾಷ್ಟ್ರದಲ್ಲಿ ಬುಲೆಟ್ ರೈಲು ಯೋಜನೆ ನಿಲ್ಲಿಸಿದವರು ಯಾರು?, ಪಾಲ್ಘರ್ ಜಿಲ್ಲೆಯಲ್ಲಿ ₹65,000 ಕೋಟಿ ವೆಚ್ಚದ ವಾಧ್ವನ್ ಯೋಜನೆ ನಿಲ್ಲಿಸಿದವರು ಯಾರು?, ನಾನಾರ್ ರಿಫೈನರಿ ಯೋಜನೆಯನ್ನು ನಿಲ್ಲಿಸಿದವರು ಯಾರು ಮತ್ತು ಮುಂಬೈನ ಆರೆ ಕಾಲೋನಿಯಲ್ಲಿ ಮೆಟ್ರೋ ಕಾರ್ ಶೆಡ್ ಯೋಜನೆಗೆ ಅಡೆತಡೆಗಳನ್ನು ಸೃಷ್ಟಿಸಿದವರು ಯಾರು? ಎಂದು ಪ್ರಶ್ನಿಸಿದರು.
ಈ ಯೋಜನೆಗಳು ಮಹಾರಾಷ್ಟ್ರಕ್ಕೆ ಪ್ರಯೋಜನಕಾರಿಯಾಗಿಲ್ಲವೇ?. ಈ ಎಲ್ಲ ಯೋಜನೆಗಳು ಗುಜರಾತ್‌ಗೆ ಲಾಭದಾಯಕವೇ? ನೀವು ಅಧಿಕಾರದಲ್ಲಿದ್ದಾಗ ಒಂದಲ್ಲ ಎರಡಲ್ಲ ಐದು ಯೋಜನೆಗಳಿಗೆ ಅಡ್ಡಗಾಲು ಹಾಕಿದ್ದೀರಿ. ಈಗ ನೀವು ಮಹಾರಾಷ್ಟ್ರದ ಹಿತಾಸಕ್ತಿ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿದ್ದೀರಿ ಮತ್ತು ರಾಜಕೀಯಕ್ಕಾಗಿ ಏನು ಬೇಕಾದರೂ ಹೇಳುತ್ತಿದ್ದೀರಿ ಎಂದು ಆರೋಪಿಸಿದರು.