ನವದೆಹಲಿ :ಉತ್ತರಪ್ರದೇಶ ಉದ್ಯಮಿ ಪಿಯೂಷ್ ಜೈನ್ ಅವರ ಮನೆ, ಕಾರ್ಖಾನೆ ಮತ್ತು ಇತರ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ನಗದು, ಚಿನ್ನಾಭರಣಗಳನ್ನು ಈಗಾಗಲೇ ಜಪ್ತಿ ಮಾಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿದ್ದಾರೆ.
ದೆಹಲಿಯಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಕನೌಜ್ನಲ್ಲಿ ಸುಗಂಧ ದ್ರವ್ಯ ವ್ಯಾಪಾರಿ ಮೇಲೆ ದಾಳಿ ನಡೆಸಿ 200 ಕೋಟಿ ರೂ. ವಶಕ್ಕೆ ಪಡಿಸಿಕೊಳ್ಳಲಾಗಿದೆ. ಇದು ಬಿಜೆಪಿ ಹಣವಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ:'ಕೈ' ಬಿಟ್ಟು ಆಮ್ ಆದ್ಮಿ ಪಕ್ಷ ಸೇರಿದ ವಿರೇಂದ್ರ ಸೆಹ್ವಾಗ್ ಸಹೋದರಿ ಅಂಜು!
ನಿರ್ಮಲಾ ಸೀತಾರಾಮನ್ ಹೇಳಿದ್ದೇನು!?
ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವ ಹಣ ಬಿಜೆಪಿ ಪಕ್ಷಕ್ಕೆ ಸೇರಿದ್ದು ಎಂದು ಪ್ರತಿಪಕ್ಷಗಳು ಮಾತನಾಡಿಕೊಳ್ಳುತ್ತಿವೆ. ಐಟಿ ಅಧಿಕಾರಿಗಳು ತಪ್ಪಾಗಿ ಪಿಯೂಷ್ ಜೈನ್ ನಿವಾಸದ ಮೇಲೆ ದಾಳಿ ನಡೆಸಿವೆ ಎಂಬ ಮಾತು ಕೇಳಿ ಬರಲು ಶುರುವಾಗಿದೆ ಎಂದು ಪ್ರಶ್ನೆ ಮಾಡಿದವು.
ಈ ವೇಳೆ ಉತ್ತರ ನೀಡಿದ ನಿರ್ಮಲಾ ಸೀತಾರಾಮನ್, ಇದು ಬಿಜೆಪಿ ಹಣವಲ್ಲ. ಯಾವುದೇ ಸಾಮಾನ್ಯ ವ್ಯಕ್ತಿಯ ಮನೆಯಲ್ಲಿ 24 ಕೆಜಿ ಚಿನ್ನ ಇರಲು ಸಾಧ್ಯವಿಲ್ಲ. ಮನೆಯ ಗೋಡೆ ಎಷ್ಟು ಎತ್ತರವೂ, ನಗದು ಕೂಡ ಅಷ್ಟೇ ಎತ್ತರವಾಗಿದೆ ಎಂದರು.
ಈ ದಾಳಿಯಿಂದಾಗಿ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸಂಕಷ್ಟಕ್ಕೊಳಗಾಗಿದ್ದಾರೆ. ಐಟಿ ದಾಳಿಗಳು ರಾಜಕೀಯ ಪ್ರೇರಿತ ಆಗಿರುವುದಿಲ್ಲ. ಆದಾಯ ತೆರಿಗೆ ಇಲಾಖೆ ದಾಳಿ ಸಮರ್ಥಿಸಿಕೊಂಡಿರುವ ವಿತ್ತ ಸಚಿವೆ, ಗುಪ್ತಚರ ಇಲಾಖೆ ನೀಡುವ ಸೂಚನೆ ಮೇರೆಗೆ ಅಧಿಕಾರಿಗಳು ದಾಳಿ ನಡೆಸುತ್ತಾರೆ. ಇದರಲ್ಲಿ ಬಿಜೆಪಿ ಕೈವಾಡವಿಲ್ಲ ಎಂದಿದ್ದಾರೆ.
ಮುಂದಿನ ವರ್ಷದ ಆರಂಭದಲ್ಲೇ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅದರ ಬೆನ್ನಲ್ಲೇ ಬಿಜೆಪಿ ಐಟಿ ದಾಳಿ ನಡೆಸಿದೆ ಎಂಬ ಮಾತುಗಳು ಕೇಳಿ ಬರಲು ಶುರುವಾಗಿದ್ದವು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸೀತಾರಾಮನ್ ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ.