ನವದೆಹಲಿ: ಅದು 2012ನೇ ವರ್ಷ. ಆ ಸುದ್ದಿ ಕೇಳಿ ಇಡೀ ಪ್ರಪಂಚವೇ ಬೆಚ್ಚಿಬಿದ್ದ ಘಟನೆ. ಈ ಘಟನೆ ನಡೆದು ಈಗಾಗಲೇ 8-9 ವರ್ಷ ಕಳೆದು ಹೋಗಿದೆ. ಆದ್ರೂ ಸಹ ಈ ಘಟನೆ ಇನ್ನೂ ಅಚ್ಚಳಿಯದೇ ನೆನಪಿನಲ್ಲಿದೆ. ನಾನು ಹೇಳುತ್ತಿರುವ ಘಟನೆ 16 ಡಿಸೆಂಬರ್ 2012ರಲ್ಲಿ ನಡೆದ ನಿರ್ಭಯ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ.
ಈ ಅತ್ಯಾಚಾರ ಮತ್ತು ಅವಳು ಆಸ್ಪತ್ರೆಯಲ್ಲಿ ನರಳಿ - ನರಳಿ ಪ್ರಾಣಬಿಟ್ಟ ಘಟನೆ ಇಡೀ ಪ್ರಪಂಚವನ್ನೇ ಬೆಚ್ಚಿ ಬೀಳಿಸಿತ್ತು. ಅಪರಾಧಿಗಳ ವಿರುದ್ಧ ಇಡೀ ದೇಶವೇ ಆಕ್ರೋಶಗೊಂಡು ಒಗ್ಗಟ್ಟಾಗಿ ಪ್ರತಿಭಟಿಸಿತ್ತು. ಅದೇ ಸಮಯದಲ್ಲಿ ನಿರ್ಭಯ ತಾಯಿ ಕಗ್ಗತ್ತಲೆಯಲ್ಲಿ ಅರಳುತ್ತಿರುವ ಸೂರ್ಯನಂತೆ ಉದಯಿಸಿದರು. ನ್ಯಾಯಕ್ಕಾಗಿ ನ್ಯಾಯಾಲಯದ ಸುತ್ತ ತಿರುಗಿ ಜಯ ಗಳಿಸಿದರು. ಏಕೆಂದರೆ ಆ ತಾಯಿಗೆ ಮಗಳ ನೋವು ಗೊತ್ತಿತ್ತು.
ಇಂದು ಮಹಿಳೆಯ ದಿನ. ಇದರ ನಿಮಿತ್ತ ಒಬ್ಬ ತಾಯಿ ತನ್ನ ಮಗಳಿಗಾಗಿ ಪಟ್ಟ ಆ ಕಷ್ಟದ ಬಗ್ಗೆ ಮತ್ತೊಮ್ಮೆ ಹೇಳುತ್ತಿದ್ದೇವೆ. ಅತ್ಯಾಚಾರದ ನಂತರ ನಿರ್ಭಯಾ 12-13 ದಿನಗಳ ಕಾಲ ಜೀವಂತವಾಗಿದ್ದರು. ಆದರೆ, ಅಂತಹ ಸ್ಥಿತಿಯಲ್ಲಿದ್ದಾಗ ಆಕೆಗೆ ಒಂದು ಚಮಚ ನೀರು ನೀಡಲು ಸಾಧ್ಯವಾಗಲಿಲ್ಲ ಎಂದು ಆಶಾ ದೇವಿ ಹೇಳುತ್ತಾರೆ.
ಆಕೆ ನೀರು ಕೇಳುತ್ತಿದ್ದಳು. ಆದರೆ ನಮಗೆ ನೀರು ನೀಡಲು ಸಾಧ್ಯವಾಗಲಿಲ್ಲ. ಆ ಘಟನೆ ನನ್ನ ಹೃದಯದಲ್ಲಿ ಅಚ್ಚಳಿಯದೇ ಹಾಗೇ ಉಳಿದಿದೆ. ಮಗಳು ನಮ್ಮೊಂದಿಗೆ ಇಲ್ಲ. ಆದರೆ, ಮಹಿಳೆಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಯಾವಾಗಲೂ ಧ್ವನಿ ನೀಡುತ್ತೇನೆ ಎಂದು ಆಶಾ ದೇವಿ ಹೇಳುತ್ತಾರೆ.
’’ನಾನು ಜೀವನದಲ್ಲಿ ಏನು ಮಾಡುತ್ತೇನೆ ಗೊತ್ತಿಲ್ಲ. ಆದರೆ ಅನ್ಯಾಯವಾಗುವ ಪ್ರತಿಯೊಬ್ಬ ಹುಡುಗಿಯ ಬೆನ್ನಿಗೆ ನಿಲ್ಲುತ್ತೇನೆ. ಆಗೆಯೇ ನನ್ನ ಶಕ್ತಿ ಮೀರಿ ನ್ಯಾಯಕ್ಕಾಗಿ ಹೋರಾಡುತ್ತೇನೆ’’ ಎಂಬುದು ಆಶಾ ದೇವಿಯ ಮಾತಾಗಿದೆ.
ಜೈಲಿನ ಕೈಪಿಡಿ ಪ್ರಕಾರ ಅಪರಾಧಿಗಳು ಕೊನೆಯ ಕ್ಷಣದವರೆಗೂ ಬದುಕುವ ಅಧಿಕಾರವಿದೆ. ಒಂದಕ್ಕಿಂತ ಹೆಚ್ಚು ಅಪರಾಧಿಗಳಿದ್ರೆ, ಅಂತವರಿಗೆ ಏಕಕಾಲದಲ್ಲಿ ಶಿಕ್ಷೆ ನೀಡಲಾಗುತ್ತೆ. ಅಂತಹ ಪರಿಸ್ಥಿತಿಯಲ್ಲಿ ಆಶಾ ದೇವಿ ಅನೇಕ ಬಾರಿ ನೋವು ಅನುಭವಿಸಿದ್ದಾರೆ. ನಿರ್ಭಯಾ ಘಟನೆಯಿಂದ ನಾವು ಕಲಿಯಬೇಕಾಗಿದ್ದು ಬಹಳಷ್ಟಿದೆ.