ತಿರುವನಂತಪುರಂ: ಕೇರಳದ ವಯನಾಡು ಜಿಲ್ಲೆಯ ಬಾವಲಿಗಳ ಸ್ಯಾಂಪಲ್ಗಳಲ್ಲಿ ನಿಫಾ ವೈರಸ್ ಇರುವುದನ್ನು ಐಸಿಎಂಆರ್ ದೃಢಪಡಿಸಿದ್ದು, ಈ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
"ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ವಯನಾಡಿನ ಸುಲ್ತಾನ್ ಬತ್ತೇರಿ ಹಾಗೂ ಮಾನಂತವಾಡಿಗಳ ಬಾವಲಿಗಳಿಂದ ಸಂಗ್ರಹಿಸಿದ ಸ್ಯಾಂಪಲ್ಗಳಲ್ಲಿ ನಿಫಾ ವೈರಸ್ ಇರುವುದು ಪತ್ತೆಯಾಗಿದೆ. ವಯನಾಡಿನಲ್ಲಿ ಎಮರ್ಜೆನ್ಸಿ ಆಧಾರದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ, ಆದರೆ ಜಾಗೃತರಾಗಿರಿ. ಜೊತೆಗೆ ಯಾವುದೇ ಪ್ರಾಣಿಗಳು ಹಾಗೂ ಪಕ್ಷಿಗಳು ತಿಂದ ಹಣ್ಣುಗಳನ್ನು ತಿನ್ನಬೇಡಿ. ಹಾಗೂ ರೋಗ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ" ಎಂದು ವಿನಂತಿಸಿದ್ದಾರೆ.
"ಇತರ ಜಿಲ್ಲೆಗಳಲ್ಲಿ ನಿಫಾ ವೈರಸ್ ಇರುವಿಕೆಯ ಬಗ್ಗೆ ಅವಲೋಕನಗಳು ಹಾಗೂ ಅಧ್ಯಯನಗಳು ನಡೆಯುತ್ತಿವೆ. ವಯನಾಡಿನಲ್ಲಿ ಎಲ್ಲ ಮನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜನರಲ್ಲಿ ನಿಫಾ ಬಗ್ಗೆ ಜಾಗೃತಿ ಮೂಡಿಸಲು, ನಿಫಾ ಲಕ್ಷಣಗಳನ್ನು ಹೊಂದಿರುವ ರೋಗಿಗಳನ್ನು ಪರೀಕ್ಷಿಸಲು ಆರೋಗ್ಯ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಐಸಿಎಂಆರ್ ಸಂಶೋಧನೆಗಳ ಪ್ರಕಾರ, ದೇಶದ ಯಾವುದೇ ಭಾಗದಲ್ಲಿ ನಿಫಾ ಹೆಚ್ಚಾಗುವ ಎಲ್ಲ ಸಾಧ್ಯತೆಗಳಿವೆ. ಭಯ ಪಡುವುದು ಪರಿಹಾರವಲ್ಲ. ನಾವು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಆತಂಕದ ಅಗತ್ಯವಿಲ್ಲ" ಎಂದು ತಿಳಿಸಿದರು.
"ನಿಫಾ ಹರಡುವಿಕೆ ನಿಯಂತ್ರಣ ಹಾಗೂ ನಿಫಾ ಸಂಶೋಧನೆಗಾಗಿ ಗುರುವಾರದಿಂದ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಒನ್ ಹೆಲ್ತ್ ಸೆಂಟರ್ ಕಾರ್ಯನಿರ್ವಹಿಸಲಿದೆ. ಇದನ್ನು ಸಂಶೋಧನಾ ಸಂಸ್ಥೆಯಾಗಿ ಮೇಲ್ದರ್ಜೇಗೇರಿಸಲು ಯೋಜನೆ ರೂಪಿಸಲಾಗಿದೆ. ಜಿಲ್ಲಾಧಿಕಾರಿಗಳು ಇದರ ಮೇಲ್ವಿಚಾರಣೆ ಮಾಡುತ್ತಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಕೇರಳ ಸರ್ಕಾರ ಭವಿಷ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಒಂದು ಆರೋಗ್ಯ ಕೇಂದ್ರವನ್ನು ಸಂಶೋಧನಾ ಕೇಂದ್ರವನ್ನಾಗಿ ಮಾಡಲು ಯೋಜನೆ ರೂಪಿಸುತ್ತಿದೆ."
"ಕಳೆದ ಸೆಪ್ಟೆಂಬರ್ನಲ್ಲಿ ವಯನಾಡ್ಗೆ ಸಮೀಪವಿರುವ ಕೋಯಿಕ್ಕೋಡ್ನಲ್ಲಿ ನಿಫಾ ಸೋಂಕು ನಾಲ್ಕನೇ ಬಾರಿ ವರದಿಯಾಗಿತ್ತು. ಇದುವರೆಗೆ ಒಟ್ಟು ಆರು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ನಾಲ್ವರು ಚೇತರಿಸಿಕೊಂಡಿದ್ದು, ಎರಡು ಸಾವು ವರದಿಯಾಗಿತ್ತು. ಕೋಯಿಕ್ಕೋಡ್ನ 42 ದಿನಗಳ ನಿಫಾ ಇನ್ಕ್ಯುಬೇಷನ್ ಅವಧಿ ಗುರುವಾರ ಕೊನೆಗೊಳ್ಳಲಿದೆ. ಸದ್ಯ ಕೋಝಿಕ್ಕೋಡ್ನಲ್ಲಿ ಹೊಸ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ."
"ನಿಫಾ ವೈರಸ್ ಸಾವಿನ ಪ್ರಮಾಣ 70-90 ಶೇ ಇತ್ತು. ಆದರೆ, ಅದೇ ಈಗ ಕೋಝಿಕ್ಕೋಡ್ನಲ್ಲಿ 33.3 ಶೇಕಡಾಕ್ಕೆ ಕಡಿಮೆಯಾಗಿದೆ. ಕೇರಳದಲ್ಲಿ ಮರುಕಳಿಸುತ್ತಿರುವ ನಿಫಾ ಸೋಂಕಿಗೆ ಕಾರಣಗಳನ್ನು ಕಂಡು ಹಿಡಿಯಲು ಅಧ್ಯಯನದ ಭಾಗವಾಗಿ ರಾಜ್ಯದ ವಿವಿಧ ಭಾಗಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ. 42 ದಿನಗಳ ಇನ್ಕ್ಯುಬೇಷನ್ ಅವಧಿ ಮುಗಿದ ನಂತರ ಕೋಯಿಕ್ಕೋಡ್ ಅಧಿಕೃತವಾಗಿ ನಿಫಾ ಸೋಂಕು ಮುಕ್ತವಾಗಲಿದೆ" ಎಂದು ತಿಳಿಸಿದರು.
ಇದನ್ನೂ ಓದಿ:ಕೋಝಿಕ್ಕೋಡ್ನಲ್ಲಿ ನಿಫಾ ಆತಂಕ ದೂರ-ತೆರೆದ ಶಾಲೆಗಳು; ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯ