ನವದೆಹಲಿ: "ಇದುವರೆಗೆ ಕೇರಳ ರಾಜ್ಯದಲ್ಲಿ ಆರು ನಿಫಾ ವೈರಸ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಇಬ್ಬರನ್ನು ಬಲಿ ತೆಗೆದುಕೊಂಡಿದೆ. ಸದ್ಯಕ್ಕೆ ಪರಾವೆಗಳನ್ನು ಗಮನಿಸಿದರೆ ನಿಫಾ ವೈರಸ್ ಸ್ಫೋಟ ಕೇರಳದ ಕೋಯಿಕ್ಕೋಡ್ ಜಿಲ್ಲೆಗೆ ಮಾತ್ರ ಸೀಮಿತವಾಗಿದೆ" ಎಂದು ಸೂಚಿಸುತ್ತದೆ ಎಂದುಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹಾನಿರ್ದೇಶಕ ರಾಜೀವ್ ಬಹ್ಲ್ ಹೇಳಿದ್ದಾರೆ.
ನಿಫಾ ವೈರಸ್ ಸಾವಿನ ಪ್ರಮಾಣ ಕೋವಿಡ್- 19 ಗಿಂತ ಹೆಚ್ಚು:ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, "ಕೋವಿಡ್- 19 ಸಾಂಕ್ರಾಮಿಕ ರೋಗಕ್ಕೆ ಹೋಲಿಸಿದರೆ ನಿಫಾ ವೈರಸ್ ಸೋಂಕಿಗೆ ಒಳಗಾದವರಲ್ಲಿ ಮರಣ ಪ್ರಮಾಣ ಹೆಚ್ಚಿದೆ. ಕೋವಿಡ್ ಸೋಂಕಿತರಲ್ಲಿ ಸಾವಿನ ಪ್ರಮಾಣ 2-3 ಪ್ರತಿಶತವಾಗಿದ್ದರೆ, ನಿಫಾದಲ್ಲಿ ಸಾವಿನ ಪ್ರಮಾಣ 40-70 ಪ್ರತಿಶತದವರೆಗೆ ಇದೆ. ನಿಫಾ ವೈರಸ್ 40-70 ಪ್ರತಿಶತದಷ್ಟು ಹೆಚ್ಚಿನ ಮರಣ ಸಾಧ್ಯತೆಯನ್ನು ಹೊಂದಿದ್ದರೂ, ಹಿಂದಿನ ನಿಫಾ ಸ್ಫೋಟ ಪ್ರಮಾಣ ಚಿಕ್ಕದಾಗಿ, ಅಲ್ಪಾವಧಿಯದಾಗಿತ್ತು" ಎಂದು ತಿಳಿಸಿದ್ದಾರೆ.
"2018ರಲ್ಲಿ ಒಟ್ಟು 18 ಲ್ಯಾಬ್ಗಳು ನಿಫಾ ಪಾಸಿಟಿವ್ ಪ್ರಕರಣಗಳನ್ನು ದೃಢಪಡಿಸಿದ್ದವು. ಮತ್ತು ಒಂದು ತಿಂಗಳಲ್ಲಿ ನಿಫಾ ವೈರಸ್ ಸ್ಫೋಟಗೊಂಡು, ಹರಡಿತ್ತು. ಹಾಗಾಗಿ ಆದಷ್ಟು ಬೇಗ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದು ಮುಖ್ಯ. ರಾಜ್ಯದ ಆರೋಗ್ಯ ಅಧಿಕಾರಿಗಳು ಅಗತ್ಯ ಪ್ರೊಟೋಕಾಲ್ಗಳನ್ನು ಜಾರಿಗೆ ತಂದಿದ್ದಾರೆ.ಎನ್ಸಿಡಿಸಿ, ಐಸಿಎಂಆರ್ ಹಾಗೂ ಇತರರ ಸಹಕಾರದೊಂದಿಎಗ ವೈರಸ್ ಮತ್ತಷ್ಟು ಹರಡುವುದನ್ನು ತಡೆಯಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ." ಎಂದು ತಿಳಿಸಿದರು.
"ಐಸಿಎಂಆರ್ ಮಾದರಿಗಳ ಪರೀಕ್ಷೆಗಾಗಿ ತನ್ನ ಬಿಎಸ್ಎಲ್- 3 ಮೊಬೈಲ್ ಲ್ಯಾಬ್ಗಳನ್ನು ಸ್ಥಳದಲ್ಲಿ ನಿಯೋಜಿಸಿದೆ. ಇದಲ್ಲದೇ ಕೋಯಿಕ್ಕೋಡ್ನಲ್ಲಿ ವೈರಸ್ ಸಂಶೋಧನೆ ಮತ್ತು ರೋಗ ನಿರ್ಣಯ ಪ್ರಯೋಗಾಲಯಗಳ (ವಿಆರ್ಡಿಎಲ್) ಜಾಲವನ್ನೂ ಸಕ್ರಿಯಗೊಳಿಸಿದೆ. ಐಸಿಎಂಆರ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ICMR-NIV) ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ (ICMR-NIE) ತಂಡಗಳನ್ನು ಕೂಡ ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಸೋಂಕು ಹರಡುವಿಕೆ ನಿಯಂತ್ರಣ ಪ್ರಯತ್ನಗಳನ್ನು ಇನ್ನಷ್ಟು ಗಟ್ಟಿಮಾಡಲು ರಾಜ್ಯದ ಅಧಿಕಾರಿಗಳೊಂದಿಗೆ ನಿರಂತರವಾಗಿ ಕೆಲ ಮಾಡುತ್ತಿದೆ" ಎಂದು ಮಾಹಿತಿ ನೀಡಿದರು.