ತಿರುವನಂತಪುರಂ (ಕೇರಳ):ನಿಫಾ ವೈರಸ್‌ನಿಂದ ಇಬ್ಬರು ಸಾವನಪ್ಪಿರುವ ಶಂಕೆ ಹಿನ್ನೆಲೆಯಲ್ಲಿ ಕೇರಳ ಆರೋಗ್ಯ ಇಲಾಖೆ ಸೋಮವಾರ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸಿದ್ದಾರೆ ಎಂದು ಆರೋಗ್ಯ ಇಲಾಖೆ ಸೋಮವಾರ ರಾತ್ರಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಜ್ವರದಿಂದ ಬಳಲುತ್ತಿದ್ದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಖಾಸಗಿ ಆಸ್ಪತ್ರೆ ವರದಿ ಮಾಡಿರುವುದಾಗಿ ಪ್ರಕಟಣೆ ಹೇಳಿದೆ. ಈ ಸಾವು ನಿಫಾ ವೈರಸ್‌ನಿಂದಲೇ ಉಂಟಾಗಿರಬಹುದು ಎಂದು ಬಲವಾಗಿ ಶಂಕಿಸಲಾಗಿದೆ. ಮೃತರಲ್ಲಿ ಒಬ್ಬರ ಸಂಬಂಧಿಯನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
2018 ಮತ್ತು 2021ರಲ್ಲಿ ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ಸೋಂಕಿನಿಂದ ಸಾಕಷ್ಟು ಸಾವುಗಳು ವರದಿಯಾಗಿದ್ದವು. ದಕ್ಷಿಣ ಭಾರತದಲ್ಲಿ ಮೊದಲ ನಿಫಾ ವೈರಸ್ ಕೋಝಿಕ್ಕೋಡ್‌ನಲ್ಲಿ ಮೇ 19, 2018 ರಂದು ಪತ್ತೆಯಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ, ನಿಫಾ ಸೋಂಕು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಝೂನೋಟಿಕ್ ಕಾಯಿಲೆಯಾಗಿದೆ. ಇದು ಕಲುಷಿತ ಆಹಾರದ ಮೂಲಕ ಅಥವಾ ನೇರವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಲ್ಲದು.
"ಸೋಂಕಿತ ಜನರಿಂದ, ಲಕ್ಷಣರಹಿತ (ಸಬ್‌ಕ್ಲಿನಿಕಲ್) ಸೋಂಕಿನಿಂದಾಗಿ ತೀವ್ರ ಉಸಿರಾಟದ ಸಮಸ್ಯೆ ಮತ್ತು ಮಾರಣಾಂತಿಕ ಎನ್ಸೆಫಾಲಿಟಿಸ್‌ವರೆಗೂ ಇದು ಹಲವಾರು ರೋಗಗಳನ್ನು ಉಂಟುಮಾಡುತ್ತದೆ" ಎಂದು ಡಬ್ಲ್ಯೂಹೆಚ್ಒ ಹೇಳಿದೆ.
ನಿಫಾ ವೈರಸ್ ಎಂದರೇನು?: ಇದು ಝೂನೋಟಿಕ್ ವೈರಸ್. ಕೋವಿಡ್ನಂತೆ ಸಾಂಕ್ರಾಮಿಕ ರೋಗ. ಬಾವಲಿಗಳಿಂದ ಹುಟ್ಟಿಕೊಂಡು ಇತರ ಪ್ರಾಣಿ ಮತ್ತು ಮನುಷ್ಯರಿಗೆ ಹರಡುತ್ತದೆ. ಇಂತಹ ವೈರಸ್ ಹರಡುವಿಕೆಯು ಸಾಮಾನ್ಯವಾಗಿ ಹಂದಿ, ನಾಯಿ ಮತ್ತು ಕುದುರೆಗಳಲ್ಲಿ ಕಂಡುಬರುತ್ತದೆ. ಆದರೆ ಮನುಷ್ಯರ ಮೂಲಕ ಹರಡಿದರೆ ಆಗ ಅದು ಮಾರಕವಾಗಬಹುದು. ಈ ವೈರಸ್‌ನ ಕಾಲಾವಧಿ 5ರಿಂದ 14 ದಿನಗಳು ಮತ್ತು 45 ದಿನಗಳವರೆಗೂ ಇರುತ್ತದೆ.