ಶಿಮ್ಲಾ :ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಬಸ್ತೇರಿ ಬಳಿ ಭೂಕುಸಿತ ಉಂಟಾಗಿ ಮೃತಪಟ್ಟವರ ಕುಟುಂಬಸ್ಥರು ಮತ್ತು ಗಾಯಾಳುಗಳಿಗೆ ಪಿಎಂ ರಿಲೀಫ್ ಫಂಡ್ನಿಂದ ಪ್ರಧಾನಿ ನರೇಂದ್ರ ಮೋದಿ ಪರಿಹಾರ ಘೋಷಣೆ ಮಾಡಿದ್ದಾರೆ.
ಮೃತರ ಕುಟುಂಬಸ್ಥರಿಗೆ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರವನ್ನು ಪ್ರಧಾನಿ ಘೋಷಿಸಿದ್ದಾರೆ. ಅಲ್ಲದೆ, ದೂರವಾಣಿ ಕರೆ ಮಾಡಿ ಘಟನೆಯ ಬಗ್ಗೆ ಪ್ರಧಾನಿ ಮಾಹಿತಿ ಪಡೆದಿದ್ದಾರೆ.
ಭಾರಿ ಮಳೆಯಿಂದ ಬಸ್ತೇರಿಯ ಸಾಂಗ್ಲಾ-ಚಿಟ್ಕುಲ್ ರಸ್ತೆ ಬಳಿ ಭಾನುವಾರ ಮಧ್ಯಾಹ್ನ ಪರ್ವತದ ತುದಿಯಲ್ಲಿ ಹಲವು ಬಾರಿ ಭೂಕುಸಿತ ಸಂಭವಿಸಿದ್ದು, ಬಂಡೆಗಳು ಉರುಳಿಬಿದ್ದ ಪರಿಣಾಮ 9 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಸೇತುವೆ ಮುರಿದು ಬಿದ್ದಿದೆ.
ಓದಿ : ಭೂಕುಸಿತದ ಭಯಾನಕ ವಿಡಿಯೋ: ಪರ್ವತದಿಂದ ಉರುಳಿದ ಬಂಡೆಗಳಿಗೆ 9 ಪ್ರವಾಸಿಗರು ಬಲಿ
ಭೂಕುಸಿತ ಸಂಭವಿಸುತ್ತಿರುವ ಭೀಕರ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಗುಡ್ಡದ ಮೇಲಿಂದ ಬೃಹತ್ ಗಾತ್ರದ ಬಂಡೆಗಳು ಉರುಳಿ ಬಂದು ಸೇತುವೆ ಮೇಲೆ ಬೀಳುತ್ತಿರುವ ದೃಶ್ಯ ಭಯಾನಕವಾಗಿದೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ ಟೆಂಪೋ ಟ್ರಾವೆಲ್ಲರ್ ಮೇಲೆ ಬಂಡೆಗಳು ಉರುಳಿ ಬಿದ್ದ ಪರಿಣಾಮ 9 ಮಂದಿ ಸ್ಥಳದಲ್ಲಿ ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ. ಚಿಟ್ಕುಲ್ನಿಂದ ಸಾಂಗ್ಲಾಕ್ಕೆ ತೆರಳುತ್ತಿದ್ದ ಪ್ರಯಾಣಿಕರ ವಾಹನದ ಮೇಲೆ ಬಂಡೆಗಳು ಉರುಳಿದೆ. ಇದೇ ರೀತಿಯ ಘಟನೆಯಲ್ಲಿ ಜಿಲ್ಲೆಯ ಮತ್ತೊಂದೆಡೆ ಬಂಡೆ ಉರುಳಿ ಬಿದ್ದು ಪಾದಚಾರಿ ಮೃತಪಟ್ಟಿದ್ದಾರೆ.
ದುರ್ಘಟನೆಯಲ್ಲಿ ಮೃತರನ್ನು ಮಾಯಾ ದೇವಿ ಬಿಯಾನಿ (55), ಅವರ ಪುತ್ರ ಅನುರಾಗ್ ಬಿಯಾನಿ (31) ಮಗಳು ರಿಚಾ ಬಿಯಾನಿ (25), ಮಹಾರಾಷ್ಟ್ರದ ಪ್ರತಿಭಾ ಸುನಿಲ್ ಪಾಟೀಲ್ (27), ಜೈಪುರದ ದೀಪ ಶರ್ಮಾ (34), ಅಮೋಘ್ ಬಾಪತ್ (27), ಛತ್ತೀಸ್ಗಢದ ಸತೀಶ್ ಕಟಕ್ಬರ್ (34), ಪಶ್ಚಿಮ ಬಂಗಾಳದ ಚಾಲಕ ಉಮ್ರಾಬ್ ಸಿಂಗ್ (42) ಮತ್ತು ಕುಮಾರ್ ಉಲ್ಹಾಸ್ ವೇದಪಥಕ್ (37) ಎಂದು ಗುರುತಿಸಲಾಗಿದೆ.