ಕೊಚ್ಚಿ(ಕೇರಳ):ಕೆಲಸ ಕೊಡಿಸುವ ನೆಪದಲ್ಲಿ ಮನೆಬಿಟ್ಟು ಓಡಿಬಂದ 17 ವರ್ಷದ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಮಾಡಿ, ವೇಶ್ಯಾವಾಟಿಕೆ ದಂಧೆಗೆ ದೂಡಿದ ಪ್ರಕರಣ ಕೇರಳದಲ್ಲಿ ನಡೆದಿದೆ. ಇದರಲ್ಲಿ ಭಾಗಿಯಾದ ಮಹಿಳೆ ಸೇರಿದಂತೆ 9 ಮಂದಿಯನ್ನು ಬಂಧಿಸಲಾಗಿದೆ. ಇನ್ನೂ 12 ಮಂದಿಯ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಪ್ರಕರಣವೇನು?:ಕೇರಳದ ತ್ರಿಶೂರ್ ಜಿಲ್ಲೆಗೆ ಸೇರಿದ 17 ವರ್ಷದ ಬಾಲಕಿ ಕೆಲಸ ಹರಸಿ ಮನೆಬಿಟ್ಟು ಕೊಚ್ಚಿಗೆ ಬಂದಿದ್ದಳು. ಆರೋಪಿಗಳಲ್ಲಿ ಒಬ್ಬ ಯುವಕ ಬಾಲಕಿಯನ್ನು ಪುಸಲಾಯಿಸಿ ಸ್ನೇಹ ಬೆಳೆಸಿಕೊಂಡಿದ್ದ. ಕೆಲಸ ಕೊಡಿಸುವುದಾಗಿ ಆಕೆಗೆ ನಂಬಿಸಿದ್ದ. ಈತನ ಮಾತು ನಂಬಿದ್ದ ಬಾಲಕಿ ತಾನು ಮುಂದೆ ಮೋಸ ಹೋಗುವ ಬಗ್ಗೆ ಅರಿತಿರಲಿಲ್ಲ.
ಬಾಲಕಿಯನ್ನು ಕೆಲಸದ ನೆಪದಲ್ಲಿ ಲಾಡ್ಜ್ಗೆ ಕರೆದೊಯ್ದ ಆರೋಪಿ, ಆಕೆಗೆ ಮತ್ತು ಬರುವಂತೆ ಮಾಡಲು ಕೂಲ್ಡ್ರಿಂಕ್ಸ್ನಲ್ಲಿ ನಿದ್ರೆ ಮಾತ್ರೆ ಬೆರೆಸಿ ಕುಡಿಸಿ ಅತ್ಯಾಚಾರ ಮಾಡಿದ್ದಾನೆ. ಬಳಿಕ ಆತನ ಮೂವರು ಸ್ನೇಹಿತರನ್ನೂ ಕರೆಸಿಕೊಂಡು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಹೀಗೆ ತಿಂಗಳುಗಟ್ಟಲೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ಲಾಡ್ಜ್ ಮಾಲೀಕ, ಸಿಬ್ಬಂದಿಯೂ ಭಾಗಿ:ಬಾಲಕಿಯನ್ನು ಕರೆತಂದು ಅತ್ಯಾಚಾರ ಮಾಡಲಾದ ಲಾಡ್ಜ್ನ ಮಾಲೀಕ ಕೂಡ ಇದರಲ್ಲಿ ಭಾಗಿಯಾಗಿದ್ದಾನೆ. ಅಷ್ಟೇ ಅಲ್ಲದೇ, ಅಲ್ಲಿನ ನಾಲ್ವರು ಸಿಬ್ಬಂದಿ ಕೂಡ ಆಕೆಯ ಮೇಲೆ ಎರಗಿದ್ದಾರೆ.
ವೇಶ್ಯಾವಾಟಿಕೆಗೆ ದೂಡಿದ ದುರುಳರು:ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿದ ಬಳಿಕ ಸುಮ್ಮನಾಗದ ದುರುಳರು ಆಕೆಯನ್ನು ಪಲರಿವಟ್ಟಂನಲ್ಲಿ ಹೋಂಸ್ಟೇನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುವ ಸ್ಥಳಕ್ಕೆ ತಂದು ಮಹಿಳೆಯೊಬ್ಬಳಿಗೆ ಮಾರಾಟ ಮಾಡಿದ್ದಾರೆ. ಹಲವು ತಿಂಗಳುಗಳ ಕಾಲ ವೇಶ್ಯಾವಾಟಿಕೆಗೆ ಬಲಿಯಾದ ಬಾಲಕಿ ದಂಧೆಕೋರರ ಹಿಡಿತದಿಂದ ತಪ್ಪಿಸಿಕೊಂಡು ತ್ರಿಶೂರಿನ ತನ್ನ ಮನೆ ಸೇರಿದಾಗ ಇಡೀ ಪ್ರಕರಣ ಬಯಲಾಗಿದೆ.
ಈ ಬಗ್ಗೆ ಕುಟುಂಬಸ್ಥರ ಸಮೇತ ಬಾಲಕಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪ್ರಕರಣದ ಬೆನ್ನು ಬಿದ್ದ ಪೊಲೀಸರು ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ, ಲಾಡ್ಜ್ನ ಮಾಲೀಕ ಮತ್ತು ಸಿಬ್ಬಂದಿ ಸೇರಿ 9 ಮಂದಿಯನ್ನು ಬಂಧಿಸಿದ್ದಾರೆ.
ಓದಿ:ಗ್ಯಾಂಗ್ ರೇಪ್: ಬೇಲ್ ಪಡೆದ ದುರುಳರಿಂದ ಮತ್ತೆ ಬಾಲಕಿಗೆ ಕಿರುಕುಳ.. ಬೆಂಕಿ ಹಚ್ಚಿಕೊಂಡ ಸಂತ್ರಸ್ತೆ