ಜೆಹಾನಾಬಾದ್ (ಬಿಹಾರ): ಮಂಗಳವಾರ ತಡರಾತ್ರಿ ರಿಮ್ಯಾಂಡ್ ಹೋಮ್ನಿಂದ 9 ಮಂದಿ ಬಾಲಾಪರಾಧಿಗಳು ಕಿಟಿಕಿ ಒಡೆದು ಗೋಡೆ ಹಾರಿ ಪರಾರಿಯಾಗಿರುವ ಘಟನೆ ಬಿಹಾರದ ಜೆಹಾನಾಬಾದ್ ನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪರಾರಿಯಾದ ಬಾಲಕರ ಪೈಕಿ 6 ಮಂದಿ ವೈಶಾಲಿ ಜಿಲ್ಲೆಯ ಹಾಜಿಪುರ ನಿವಾಸಿಗಳು ಎಂದು ಹೇಳಲಾಗಿದ್ದು, ಇಬ್ಬರು ಅರ್ವಾಲ್ ಮತ್ತು ಜೆಹನಾಬಾದ್ ಜಿಲ್ಲೆಯವರು ಎಂಬ ಮಾಹಿತಿ ದೊರಕಿದೆ.
ಘಟನೆ ಬಗ್ಗೆ ಮಾಹಿತಿ ಪಡೆದ ಉಪವಿಭಾಗಾಧಿಕಾರಿ ಮನೋಜ್ ಕುಮಾರ್ ಮತ್ತು ಉಪವಿಭಾಗದ ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್ ಪಾಂಡೆ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಈ ಹಿಂದೆಯೂ ಸಹ ಇದೇ ರಿಮ್ಯಾಂಡ್ ಹೋಮ್ನಿಂದ ಹಲವು ಬಾರಿ ಬಾಲಾಪರಾಧಿಗಳು ಪರಾರಿಯಾಗಿರುವ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಆದರೂ ಯಾವುದೇ ಮುಂಜಾಗ್ರತ ಕ್ರಮವನ್ನು ಸಿಬ್ಬಂದಿ ಕೈಗೊಂಡಿಲ್ಲ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ಪೋರ್ನ್ ವಿಡಿಯೋ ಪ್ರಸಾರ: ಇತ್ತೀಚಿಗೆ ಬಿಹಾರ ರಾಜಧಾನಿ ಪಾಟ್ನಾ ರೈಲ್ವೆ ನಿಲ್ದಾಣದ ಜಾಹೀರಾತು ಸ್ಕ್ರೀನ್ ಮೇಲೆ ಪೋರ್ನ್ (ಅಶ್ಲೀಲ) ವಿಡಿಯೋ ಪ್ರಸಾರವಾದ ಘಟನೆ ಭಾನುವಾರ ನಡೆದಿತ್ತು. ಹೌದು, ಸೈಬರ್ ಅಪರಾಧಿಗಳು ಹ್ಯಾಕ್ ಮಾಡಿ, ಜಾಹೀರಾತಿನ ಪರದೆಯ ಮೇಲೆ ವಿಡಿಯೋ ಪ್ಲೇ ಮಾಡಿದ್ದರು. ಇದರಿಂದ ನಿಲ್ದಾಣದಲ್ಲಿದ್ದ ರೈಲ್ವೆ ಅಧಿಕಾರಿಗಳು ಹಾಗೂ ಪ್ರಯಾಣಿಕರು ತೀವ್ರ ಮುಜುಗರಕ್ಕೆ ಒಳಗಾಗಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿದ್ದವು.