ನವದೆಹಲಿ: ನಿಕ್ಕಿ ಯಾದವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ತನಿಖೆ ಕೈಗೊಂಡಿರುವ ದೆಹಲಿ ಪೊಲೀಸರು, ಸಾಕ್ಷಿಗಾಗಿ ಆರೋಪಿ ಸಾಹಿಲ್ ಗೆಹ್ಲೋಟ್ನನ್ನು ಆತ ನಿಕ್ಕಿ ಯಾದವ್ ವಿವಾಹವಾದ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ತಪಾಸಣೆ ನಡೆಸಿದ್ದಾರೆ ಎಂದು ಕೆಲವು ಮೂಲಗಳು ತಿಳಿಸಿವೆ. ತನ್ನ ಮೊದಲ ಪತ್ನಿ ನಿಕ್ಕಿ ಯಾದವ್ ಅವಳನ್ನು ಕೊಲೆ ಮಾಡಿದ್ದಲ್ಲದೇ ಆರೋಪಿ ಅಫ್ತಾಬ್ ಅಮೀನ್ನಂತೆ ಅವಳ ಮೃತ ದೇಹವನ್ನು ಡಾಭಾದ ರೆಫ್ರಿಜರೇಟರ್ನಲ್ಲಿ ಇರಿಸಿ ಇನ್ನೊಂದು ಮದುವೆಗೆ ಕೂಡ ಸಿದ್ಧನಾಗಿದ್ದ.
ಆದರೆ, ಕೊಲೆ ಮಾಡಿ 3-4 ದಿನಗಳಲ್ಲಿ ಈತನ ಕೃತ್ಯ ಹೊರಬಿದ್ದಿದೆ. ಇದರ ತನಿಖೆ ತ್ವರಿತಗೊಳಿಸಿರುವ ದೆಹಲಿ ಪೊಲೀಸರು ಮೊದಲ ವಿವಾಹದ ಕುರಿತು ಮಾಹಿತಿ ಕಲೆ ಹಾಕಲು ಆರೋಪಿ ಜೊತೆಗೆ ಗ್ರೇಟರ್ ನೋಯ್ಡಾದ ಆರ್ಯ ಸಮಾಜ ಮಂದಿರಕ್ಕೆ ತೆರಳಿದ್ದರು. ಇದೇ ಮಂದಿರದಲ್ಲಿ ನಿಕ್ಕಿ ಯಾದವ್ ಮತ್ತು ಸಾಹಿಲ್ ಗೆಹ್ಲೋಟ್ 2020ರಲ್ಲಿ ಇಷ್ಟ ಪಟ್ಟು ವಿವಾಹವಾಗಿದ್ದರು.
ಇನ್ನು ಮೂಲಗಳ ಪ್ರಕಾರ ಪೊಲೀಸರು ತಮ್ಮ ತನಿಖೆಯಲ್ಲಿ ದೇವಸ್ಥಾನದ ಅರ್ಚಕ ಮತ್ತು ಮದುವೆಯ ಸಮಯದಲ್ಲಿ ಹಾಜರಿದ್ದ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿವರೆಗೆ ಸಾಹಿಲ್ ಗೆಹ್ಲೋಟ್ ಆತನ ತಂದೆ ಮತ್ತು ಇತರ ನಾಲ್ವರನ್ನು ಬಂಧಿಸಲಾಗಿದೆ. ಈ 4 ಜನರಲ್ಲಿ ಗೆಹ್ಲೋಟ್ಗೆ ಇಬ್ಬರು ಸೋದರ ಸಂಬಂಧಿಗಳು ಮತ್ತು ಇಬ್ಬರು ಸ್ನೇಹಿತರು ಎಂದು ತಿಳಿದು ಬಂದಿದೆ. ಸಾಹಿಲ್ ಗೆಹ್ಲೋಟ್ ಕುಟುಂಬದವರಿಗೆ ತಮ್ಮ ಮಗನ ಮೊದಲ ವಿವಾಹ ಮತ್ತು ಆತನ ಪತ್ನಿ ಮೃತ ನಿಕ್ಕಿ ಸ್ವಲ್ಪವೂ ಇಷ್ಟವಿಲ್ಲದ ಕಾರಣ ಮಗನಿಗೆ ಎರಡನೇ ವಿವಾಹಕ್ಕೆ ಒತ್ತಾಯ ಮಾಡಲಾಗಿತ್ತು ಎನ್ನಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಕ್ಕಿ ತಂಗಿ ಹೇಳಿಕೆ ದಾಖಲಿಸಿಕೊಂಡ ಪೊಲೀಸರು: ಕೊಲೆಯಾದ ನಿಕ್ಕಿಯ ತಂಗಿಯನ್ನು ಪೊಲೀಸರು ವಿಚಾರಿಸಿದಾಗ ಸಾಹಿಲ್ ಗೆಹ್ಲೋಟ್ ಜೊತೆಗಿನ ತನ್ನ ಅಕ್ಕನ ವಿವಾಹದ ಬಗ್ಗೆ ತನಗೆ ತಿಳಿದಿಲ್ಲ. ಅವರಿಬ್ಬರು ಒಳ್ಳೆಯ ಸ್ನೇಹಿತರು ಎಂಬುದು ತನಗೆ ತಿಳಿದಿತ್ತು ಎಂದು ವಿವರಿಸಿದ್ದಾಳೆ. ನಿಕ್ಕಿ ಯಾದವ್ ಹಾಗೂ ಆರೋಪಿ ಸಾಹಿಲ್ ಗೆಹ್ಲೋಟ್ 2020 ರಲ್ಲಿ ಆರ್ಯ ಸಮಾಜ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ತನ್ನ ಕುಟುಂಬಗಳಿಗೆ ತಿಳಿಸಿರಲಿಲ್ಲ. ಆದರೆ, ಯಾವಾಗ ಗೆಹ್ಲೋಟ್ಗೆ ಆತನ ಪೋಷಕರು ಅವನ ಮದುವೆಗೆ ಹುಡುಗಿಯನ್ನು ಹುಡುಕಲು ಪ್ರಾರಂಭಿಸಿದರೋ, ವಿವಾಹವಾಗಬೇಕು ಎಂದು ಒತ್ತಾಯಿಸಿದರೋ ಆಗ ಅಂತಿಮವಾಗಿ ಅವನು ಈಗಾಗಲೇ ನಿಕ್ಕಿಯನ್ನು ಮದುವೆಯಾಗಿರುವುದಾಗಿ ತನ್ನ ಕುಟುಂಬಕ್ಕೆ ಬಹಿರಂಗಪಡಿಸಿದನು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಆದರೆ ಗೆಹ್ಲೋಟ್ ಅವರ ಕುಟುಂಬಕ್ಕೆ ಸಾಹಿಲ್ ನಿಕ್ಕಿ ಯಾದವ್ ಜೊತೆಗಿನ ವಿವಾಹದ ಬಗ್ಗೆ ತಿಳಿದಾಗ, ನಮಗೆ ತಿಳಿಯದೇ ಇರುವ ಹುಡುಗಿ ಮತ್ತು ಆ ವಿವಾಹದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವರಲ್ಲದೇ ನಿಕ್ಕಿ ಕುಟುಂಬದವರು ಅವಳ ಸಂಬಂಧ ವಿವಾಹದ ಕುರಿತು ನಮಗೆ ತಿಳಿದಿರಲಿಲ್ಲ ಎಂದು ಪೋಷಕರಿಗೆ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ:ಆರೋಪಿ ಸಾಹಿಲ್ 2020ರಲ್ಲಿ ನಿಕ್ಕಿ ಯಾದವ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದ. ಈ ವಿಷಯ ತಮ್ಮಿಬ್ಬರ ಕುಟುಂಬಕ್ಕೂ ತಿಳಿದಿರಲಿಲ್ಲ. 2023ರಲ್ಲಿ ಸಾಹಿಲ್ ಗೆಹ್ಲೋಟ್ನ ಕುಟುಂಬದವರು ಮದುವೆಯಾಗುವಂತೆ ಒತ್ತಾಯ ಮಾಡಿದ್ದಲ್ಲದೇ ಮನೆಯವರು ಹುಡುಕಿದ್ದ ಯುವತಿಯೊಂದಿಗೆ ಎಂಗೇಜ್ಮೆಂಟ್ ಕೂಡ ಮಾಡಿಸಿದ್ದರು. ಈ ವಿಷಯ ನಿಕ್ಕಿಗೆ ತಿಳಿದು ಯಾವಾಗಲೂ ಇವರ ಮಧ್ಯೆ ಜಗಳವಾಗುತ್ತಿತ್ತು. 2023ರ ಫೆಬ್ರವರಿ 10 ರಂದು ಇಬ್ಬರ ನಡುವಿನ ಕಿತ್ತಾಟ ಕೊಲೆಗೆ ತಿರುಗಿದೆ. ಸಾಹಿಲ್ ನಿಕ್ಕಿಯನ್ನು ಕಾರಿನಲ್ಲೇ ಡೇಟಾ ಕೇಬಲ್ನಿಂದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ಅದೇ ಕಾರಿನಲ್ಲಿ 40 ಕಿ.ಮೀ ದೂರ ಚಲಾಯಿಸಿ ಆಕೆಯ ದೇಹವನ್ನು ಸ್ವಂತ ತನ್ನ ಸಂಬಂಧಿಕರ ಸಹಾಯದಿಂದಲೇ ಢಾಬಾದ ಫ್ರಿಡ್ಜ್ನಲ್ಲಿ ಇಟ್ಟಿದ್ದ. ಇದನ್ನೂ ಓದಿ;ನಿಕ್ಕಿ ಯಾದವ್ ಹತ್ಯೆಗೆ ಬಿಗ್ ಟ್ವಿಸ್ಟ್: ಲಿವ್ ಇನ್ ಅಲ್ಲ, ವಿವಾಹಿತ ದಂಪತಿ.. ತಂದೆಗೆ ಗೊತ್ತಿತ್ತು ಮಗನ ಕೃತ್ಯ!