ನವದೆಹಲಿ:ನಿಕ್ಕಿ ಯಾದವ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಾಹಿಲ್ ಗೆಹ್ಲೋಟ್ನನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಇದರಿಂದ ಕೊಲೆಯ ಹಿಂದಿನ ಸಂಚು ಬಯಲಿಗೆಳೆಯಲು ಅಪರಾಧ ವಿಭಾಗಕ್ಕೆ ಸಾಕಷ್ಟು ನೆರವಾಗಿದೆ. ನಿಕ್ಕಿ ಹತ್ಯೆ ಪ್ರಕರಣದಲ್ಲಿ ಸಾಹಿಲ್ ಓರ್ವನೇ ಆರೋಪಿ ಎಂಬುದು ಇಲ್ಲಿಯವರೆಗೂ ತನಿಖೆಯಲ್ಲಿ ಪತ್ತೆಯಾಗಿತ್ತು. ಆದರೆ ಈಗ ಹತ್ಯೆಯ ಸಂಚಿನಲ್ಲಿ ಇತರರು ಭಾಗಿಯಾಗಿದ್ದಾರೆ ಎಂಬುವುದನ್ನು ಅಪರಾಧ ವಿಭಾಗ ಸ್ಪಷ್ಟಪಡಿಸಿದೆ.
ಸಾಹಿಲ್ ತಂದೆ ಸೇರಿ ಐವರ ಬಂಧನ: ಪ್ರಕರಣದಲ್ಲಿ ಸಾಹಿಲ್ ತಂದೆ ಬೀರೇಂದ್ರ ಗೆಹ್ಲೋಟ್ ಹೆಸರು ಕೂಡ ಬಯಲಿಗೆ ಬಂದಿದೆ. ಕೊಲೆಗೆ ಸಂಚು ರೂಪಿಸಿದ್ದಕ್ಕಾಗಿ ಸಾಹಿಲ್ ತಂದೆ ಸೇರಿ ಒಟ್ಟು 5 ಮಂದಿಯನ್ನು ದೆಹಲಿ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಸಿಕ್ಕಿರುವ ಮಾಹಿತಿ ಪ್ರಕಾರ ಸಾಹಿಲ್ ತಂದೆಯಲ್ಲದೇ ಆತನ ಕೆಲವು ಸಂಬಂಧಿಕರು ಮತ್ತು ಸ್ನೇಹಿತರು ಕೂಡ ಈ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಶ್ರದ್ಧಾ ಮರ್ಡರ್ ರೀತಿಯ ಮತ್ತೊಂದು ಘಟನೆ: ಪ್ರೇಯಸಿ ಕೊಲೆ ಮಾಡಿ ಫ್ರಿಜ್ನಲ್ಲಿ ಶವ ಬಚ್ಚಿಟ್ಟ ಯುವಕ!
ದೆಹಲಿ ಅಪರಾಧ ವಿಭಾಗದಿಂದ ಬಂದಿರುವ ಮಾಹಿತಿ ಪ್ರಕಾರ, ಸಾಹಿಲ್ ತಂದೆ ಈ ಕೊಲೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ಫೆ.9ರ ರಾತ್ರಿ ನಿಕ್ಕಿಯನ್ನು ಭೇಟಿಯಾಗಲು ಸಾಹಿಲ್ ಬಂದು ಕಾರಿನಲ್ಲಿ ಸುಮಾರು 40 ಕಿ. ಮೀ ಪ್ರಯಾಣಿಸುವುದು ಕೂಡ ಪೂರ್ವ ಯೋಜಿತ ತಂತ್ರವಾಗಿತ್ತು. ಸಾಹಿಲ್ ತಂದೆ ವೀರೇಂದ್ರ ಗೆಹ್ಲೋಟ್ ಅವರನ್ನು ವಿಚಾರಣೆ ನಡೆಸಿದಾಗ ನಿಕ್ಕಿ ಹತ್ಯೆಯ ವಿಚಾರ ತಿಳಿದಿತ್ತು. ಆರಂಭದಲ್ಲಿ ಅವರು ಇದನ್ನು ನಿರಾಕರಿಸಿದರೂ ಬಳಿಕ ತನಿಖೆಯಲ್ಲಿ ಈ ರಹಸ್ಯ ಬಹಿರಂಗಗೊಂಡಿದೆ.