ಪುಣೆ:ಮಹಾರಾಷ್ಟ್ರದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಕೋವಿಡ್ ಸೋಂಕಿತರ ಪ್ರಕರಣ ಹೆಚ್ಚಾಗುತ್ತಿದ್ದು, ಈಗಾಗಲೇ ನಾಗ್ಪುರದಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ.
ಪುಣೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗಿರುವ ಕಾರಣ ಇದೀಗ ಅಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಮಾರ್ಚ್ 31ರವರೆಗೆ ಶಾಲಾ-ಕಾಲೇಜುಗಳು ಬಂದ್ ಇರಲಿವೆ. ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಪ್ರಮುಖವಾಗಿ ರಾತ್ರಿ 11ರಿಂದ ಬೆಳಗ್ಗೆ 6 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ.
ಹೋಟೆಲ್, ರೆಸ್ಟೋರೆಂಟ್ ಮತ್ತು ಬಾರ್ ರಾತ್ರಿ 10 ಗಂಟೆಗೆ ಬಂದ್ ಆಗಲಿದ್ದು, ಸದ್ಯ ಶೇ. 50ರಷ್ಟು ಸಾಮರ್ಥ್ಯದೊಂದಿಗೆ ಹೋಟೆಲ್-ರೆಸ್ಟೋರೆಂಟ್ ನಡೆಸಲು ಅನುಮತಿ ನೀಡಲಾಗಿದೆ. ರಾತ್ರಿ 10ರಿಂದ 11ರವರೆಗೆ ಸರಕುಗಳ ಹೋಂ ಡೆಲಿವರಿ ಇರಲಿದ್ದು, ಮಾಲ್, ಮಾರುಕಟ್ಟೆ, ಸಿನಿಮಾ ಹಾಲ್ ರಾತ್ರಿ 10 ಗಂಟೆಯೊಳಗೆ ಬಂದ್ ಆಗಿರಲಿವೆ. ಪ್ರಮುಖವಾಗಿ ಮದುವೆ ಕಾರ್ಯಕ್ರಮದಲ್ಲಿ ಕೇವಲ 50 ಜನರು ಸೇರಲು ಅವಕಾಶ ನೀಡಲಾಗಿದೆ.