ನವದೆಹಲಿ:ಭಾರತ 75ನೇ ಸ್ವಾತಂತ್ರ್ಯದ ಸಂಭ್ರಮದಲ್ಲಿದ್ದು, ಎಲ್ಲಾ ತಯಾರಿಗಳನ್ನು ನಡೆಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ವಿಶ್ವದ ಅನೇಕ ರಾಷ್ಟ್ರಗಳ ಪ್ರವಾಸಿ ಸ್ಥಳಗಳು ಮತ್ತು ಕಟ್ಟಡಗಳನ್ನು ಭಾರತದ ತ್ರಿವರ್ಣ ಧ್ವಜದ ಬಣ್ಣಗಳಿಂದ ಕಂಗೊಳಿಸುವಂತೆ ಮಾಡಲಾಗುತ್ತದೆ.
'ಆಜಾದಿ ಕಾ ಅಮೃತ್ ಮಹೋತ್ಸವ' ಹೆಸರಿನಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಲಾಗುತ್ತಿದ್ದು, ಅಮೆರಿಕ, ಇಂಗ್ಲೆಂಡ್, ದುಬೈ ಮುಂತಾದ ರಾಷ್ಟ್ರಗಳಲ್ಲಿ ಆಗಸ್ಟ್ ನಾಳೆ ಸಂಜೆಯಿಂದ ಆಗಸ್ಟ್ 16ರ ಬೆಳಗ್ಗೆವರೆಗೆ ಐತಿಹಾಸಿಕ ಕಟ್ಟಡಗಳು ಮತ್ತು ಪ್ರವಾಸಿ ಸ್ಥಳಗಳು ತ್ರಿವರ್ಣದಲ್ಲಿ ಮಿಂದೇಳಲಿವೆ.
ಕೆನಡಾದ ಪ್ರಸಿದ್ಧ ನಯಾಗರ ಜಲಪಾತದ ಅಲೆಗಳಲ್ಲೂ ತ್ರಿವರ್ಣ ಧ್ವಜ ಮೂಡಲಿದೆ. ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿ, ಅಮೆರಿಕದ ಎಂಪೈರ್ ಸ್ಟೇಟ್ ಬಿಲ್ಡಿಂಗ್, ದುಬೈನ ಬುರ್ಜ್ ಖಲೀಫಾ, ರಷ್ಯಾದ ಎವಲ್ಯೂಷನ್ ಟವರ್, ಸೌದಿ ಅರೇಬಿಯಾದ ಅಬುಧಾಬಿಯಲ್ಲಿರುವ ಪ್ರಸಿದ್ಧ ADNOC ಗ್ರೂಪ್ ಟವರ್ ಮತ್ತು ಗ್ರೇಟ್ ಬ್ರಿಟನ್ನ ಬರ್ಮಿಂಗ್‌ಹ್ಯಾಮ್ ಗ್ರಂಥಾಲಯಗಳೂ ಭಾರತೀಯ ಧ್ವಜದ ಬಣ್ಣಗಳಿಂದ ಕಂಗೊಳಿಸಲಿವೆ.