ಮಹಾರಾಷ್ಟ್ರ : ಮನ್ಸುಖ್ ಹಿರೆನ್ ಸಾವಿನ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸುವಂತೆ ಥಾಣೆ ಸೆಷನ್ಸ್ ನ್ಯಾಯಾಲಯ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕ್ಕೆ ಸೂಚಿಸಿದೆ.
ಗೃಹ ಸಚಿವಾಲಯದ ಆದೇಶದ ಹೊರತಾಗಿಯೂ, ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಪ್ರಕರಣವನ್ನು ಹಸ್ತಾಂತರಿಸದ ಕಾರಣ, ಎನ್‌ಐಎ ಕೋರ್ಟ್ ಮೆಟ್ಟಿಲೇರಿತ್ತು.
ಓದಿ : ಮನ್ಸುಖ್ ಹಿರೇನ್ ಸಾವು ಪ್ರಕರಣ: 3 ದಿನಗಳು ಕಳೆದರೂ ಎನ್ಐಎಗೆ ದಾಖಲೆ ಹಸ್ತಾಂತರಿಸದ ಎಟಿಎಸ್
ಫೆಬ್ರವರಿ 25 ರಂದು ಉದ್ಯಮಿ ಮುಖೇಶ್ ಅಂಬಾನಿ ನಿವಾಸದ ಬಳಿ ಸ್ಪೋಟಕ ತುಂಬಿದ್ದ ಸ್ಕಾರ್ಪಿಯೋ ಕಾರು ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ನಡೆಯತ್ತಿರುವಾಗಲೇ, ಕಾರಿನ ಮಾಲೀಕ ಮನ್ಸುಖ್ ಹಿರೆನ್ ಥಾಣೆ ಬಳಿ ಶವವಾಗಿ ಪತ್ತೆಯಾಗಿದ್ದರು. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಇದಕ್ಕೂ ಒಂದು ವಾರ ಮೊದಲು ಹಿರೆನ್ ತನ್ನ ಕಾರು ಕಳುವಾಗಿರುವ ಬಗ್ಗೆ ಹೇಳಿದ್ದರು.
ಪ್ರಕರಣದ ತನಿಖೆಯನ್ನು ಎಟಿಎಸ್ ನಡೆಸುತ್ತಿತ್ತು. ಈ ನಡುವೆ ಪ್ರಕರಣವನ್ನು ಎನ್ಐಗೆ ಹಸ್ತಾಂತರಿಸುವಂತೆ ಕೇಂದ್ರ ಗೃಹ ಸಚಿವಾಲಯ ಆದೇಶಿಸಿತ್ತು. ಆದರೂ, ಪ್ರಕರಣ ಹಸ್ತಾಂತರವಾಗಿರಲಿಲ್ಲ.
ಬಿಜೆಪಿ-ಶಿವಸೇನೆ ನಡುವೆ ಕೆಸೆರೆರಚಾಟ :ಅಂಬಾನಿ ಮನೆ ಬಳಿ ಸ್ಪೋಟಕ ಪತ್ತೆ ಮತ್ತು ಮನ್ಸುಖ್ ಹಿರೆನ್ ಸಾವು ಪ್ರಕರಣ ಇದೀಗ ರಾಜಕೀಯ ತಿರುವು ಪಡೆದಿದೆ. ಸ್ಪೋಟಕ ಪತ್ತೆ ಪ್ರಕರಣದಲ್ಲಿ ಮುಂಬೈ ಪೊಲೀಸ್ ಅಧಿಕಾರಿ ಮತ್ತು ಮಾಜಿ ಶಿವಸೇನೆ ಸದಸ್ಯ ಸಚಿನ್ ವಾಜೆಯನ್ನು ಎನ್‌ಐಎ ಬಂಧಿಸಿದೆ. ಇದರಿಂದ ಶಿವಸೇನೆಗೆ ಮತ್ತು ಸಿಎಂ ಉದ್ದವ್ ಠಾಕ್ರೆಗೆ ತೀವ್ರ ಮುಜುಗರ ಉಂಟಾಗಿದ್ದು, ಪ್ರತಿಪಕ್ಷ ಬಿಜೆಪಿಗೆ ದೊಡ್ಡ ಅಸ್ತ್ರ ಸಿಕ್ಕಂತಾಗಿದೆ. ಈ ನಡುವೆ ಭದ್ರತಾ ಲೋಪದ ಆರೋಪ ಹೊರಿಸಿ ಮುಂಬೈ ನಗರ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ಅವರನ್ನು ಸರ್ಕಾರ ಗೃಹ ರಕ್ಷಕ ದಳಕ್ಕೆ ವರ್ಗಾವಣೆ ಮಾಡಿತ್ತು. ಸರ್ಕಾರ ವರ್ಗಾವಣೆ ಮಾಡಿದ ಬೆನ್ನಲ್ಲೆ ಪರಂಬೀರ್ ಸಿಂಗ್ ಗೃಹ ಸಚಿವ ಅನಿಲ್ ದೇಶ್ಮುಖ್ 100 ಕೋಟಿ ಲಂಚ ಸಂಗ್ರಹಿಸುವಂತೆ ಸಚಿನ್ ವಾಜೆಗೆ ಗುರಿ ನಿಗದಿಪಡಿಸಿದ್ದರು ಎಂದು ಆರೋಪ ಮಾಡಿದ್ದಾರೆ. ಇದು ಮಹಾರಾಷ್ಟ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಈ ವಿಚಾರವನ್ನೇ ಮುಂದಿಟ್ಟುಕೊಂಡು ಗೃಹ ಸಚಿವ ಅನಿಲ್ ದೇಶ್ಮುಖ್ ತಲೆ ದಂಡಕ್ಕೆ ಬಿಜೆಪಿ ಪಟ್ಟು ಹಿಡಿದಿದೆ.
ಕೋರ್ಟ್ ಮೆಟ್ಟಿಲೇರಿದ ಪರಂಬೀರ್ ಸಿಂಗ್ :ಭ್ರಷ್ಟಾಚಾರದ ಆರೋಪ ಹೊತ್ತ ಗೃಹ ಸಚಿವ ಅನಿಲ್ ದೇಶ್ಮುಖ್, ಸಾಕ್ಷ್ಯಾಧಾರಗಳನ್ನು ನಾಶ ಮಾಡುವ ಹಾಗೂ ಪ್ರಕರಣದಲ್ಲಿ ಪ್ರಭಾವ ಬೀರುವ ಸಾಧ್ಯತೆ ಇದೆ. ಹಾಗಾಗಿ ಈ ಬಗ್ಗೆ ತಕ್ಷಣ ಸಿಬಿಐ ಮೂಲಕ ನಿಷ್ಪಕ್ಷಪಾತ ಮತ್ತು ನ್ಯಾಯಯುತ ತನಿಖೆ ನಡೆಸುವಂತೆ ಕೋರಿ ಪರಂಬೀರ್ ಸಿಂಗ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಕೇಂದ್ರದಿಂದ ಸರ್ಕಾರ ಉರುಳಿಸುವ ತಂತ್ರ :ಪೊಲೀಸ್ ಅಧಿಕಾರಿ ಪರಂಬೀರ್ ಸಿಂಗ್ ಬಿಜೆಪಿ ಏಜೆಂಟ್ ಆಗಿದ್ದು, ಕೇಂದ್ರ ಸರ್ಕಾರದ ಮೂಲಕ ರಾಜ್ಯ ಸರ್ಕಾರವನ್ನು ಉರುಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶಿವಸೇನೆ ನಾಯಕರು ಆರೋಪಿಸಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಮುಂಬೈ ಎಟಿಎಸ್ ತನಿಖೆ ನಡೆಸುತ್ತಿದ್ದ ಮನ್ಸುಖ್ ಹಿರೆನ್ ಪ್ರಕರಣವನ್ನು ಎನ್ಐಎಗೆ ವರ್ಗಾಯಿಸಿ ಕೇಂದ್ರ ಗೃಹ ಸಚಿವಾಲಯ ಆದೇಶಿಸಿತ್ತು. ಪ್ರಕರಣ ಹಸ್ತಾಂತರಿಸಲು ವಿಳಂಬ ಮಾಡಿದ ಎಟಿಎಸ್ ವಿರುದ್ಧ ಎನ್‌ಐಎ ಕೋರ್ಟ್ ಮೆಟ್ಟಿಲೇರಿತ್ತು.
ಓದಿ : ದೇಶ್ಮುಖ್ ರಕ್ಷಿಸುತ್ತಿರುವ ಫಡ್ನವೀಸ್..'ವರ್ಗಾವಣೆ ದಂಧೆ' ಬಯಲಿಗೆ ಫಡ್ನವಿಸ್ ಪಟ್ಟು
ಸದ್ಯ, ಅಂಬಾನಿ ಮನೆ ಬಳಿ ಸ್ಪೋಟಕ ಪತ್ತೆ, ಮನ್ಸುಖ್ ಹಿರೆನ್ ಸಾವು ಪ್ರಕರಣ, ಗೃಹ ಸಚಿವರ ಮೇಲೆ ಭ್ರಷ್ಟಾಚಾರದ ಆರೋಪ, ಪೊಲೀಸ್ ವರ್ಗಾವಣೆಯಲ್ಲಿ ಭ್ರಷ್ಟಾಚಾರ ಆರೋಪ ಸೇರಿದಂತೆ ಎಲ್ಲಾ ರೀತಿಯಲ್ಲೂ ಮಹಾ ಅಗಾಢಿ ಸರ್ಕಾರ ಇಕ್ಕಟಿಗೆ ಸಿಲುಕಿದ್ದು, ಇದನ್ನೇ ಅಸ್ತ್ರವಾಗಿಸಿ ಶಿವಸೇನೆಯನ್ನು ಹೆಣೆಯಲು ಬಿಜೆಪಿ ಕಸರತ್ತು ನಡೆಸುತ್ತಿದೆ.