ನವದೆಹಲಿ:ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (PFI) 25 ಕಾರ್ಯಕರ್ತರ ಫೋಟೋಗಳನ್ನು ಬಿಡುಗಡೆ ಮಾಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA), ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ.
ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಹಾಗೂ ಕೋಮುಗಲಭೆ ಸೃಷ್ಟಿಸಿದ 25 ಪಿಎಫ್ಐ ಕಾರ್ಯಕರ್ತರ ಫೋಟೋಗಳನ್ನು ಎನ್ಐಎ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ. ತಲೆಮರೆಸಿಕೊಂಡ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ ವ್ಯಕ್ತಿಗೆ ಸೂಕ್ತ ಬಹುಮಾನವನ್ನು ಕೂಡ ನೀಡಲಾಗುವುದು ಎಂದು ಹೇಳಿದೆ.
ಭಯೋತ್ಪಾದನಾ ನಿಗ್ರಹ ದಳ ಬಿಡುಗಡೆ ಮಾಡಿದ ಫೋಟೋಗಳಲ್ಲಿ, 2022ರ ಏಪ್ರಿಲ್ 16ರಂದು ಕೇರಳದ ಪಾಲಕ್ಕಾಡ್ನ ಶ್ರೀನಿವಾಸನ್ ಹತ್ಯೆಯಲ್ಲಿ ಭಾಗಿಯಾಗಿದ್ದ 10 ಪಿಎಫ್ಐ ಮುಖಂಡರು ಸೇರಿದ್ದಾರೆ. ಅಂದೂಲ್ ವಹಾಬ್ ವಿಎ, ಅಬ್ದುಲ್ ರಶೀದ್ ಕೆ, ಅಯೂಬ್ ಟಿಎ, ಮೊಹಮ್ಮದ್ ಮಂಜೂರು ಸೇರಿದಂತೆ ತಲೆಮರೆಸಿಕೊಂಡಿರುವ ಇತರ ಆರೋಪಿಗಳು ಬೇರೆ ಸಮುದಾಯದ ವ್ಯಕ್ತಿಗಳ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಸಂಸ್ಥೆ ಹೇಳಿದೆ.
"ನಿಷೇಧಿತ ಪಿಎಫ್ಐಗೆ ಸೇರಿದ ಈ ಆರೋಪಿಗಳು ಇತರ ಸಮುದಾಯದ ವ್ಯಕ್ತಿಗಳ ಹತ್ಯೆಗೆ ರೂಪಿಸಿದ್ದ ದೊಡ್ಡ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ. 2022ರ ಏಪ್ರಿಲ್ 16ರಂದು ಕೇರಳದ ಪಾಲಕ್ಕಾಡ್ನ ಶ್ರೀನಿವಾಸನ್ ಹತ್ಯೆ ಸೇರಿದಂತೆ ಹಲವಾರು ದೇಶದ್ರೋಹಿ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಅವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿದ್ದಲ್ಲಿ ದಯವಿಟ್ಟು 919497715294 ಈ ವಾಟ್ಸ್ಆ್ಯಪ್ ನಂಬರ್ಗೆ ಮೆಸೇಜ್ ಮಾಡಿ" ಎಂದು ಸಂಸ್ಥೆ ತಿಳಿಸಿದೆ.
ಶ್ರೀನಿವಾಸನ್ ಹತ್ಯೆಯಲ್ಲೂ ಭಾಗಿಯಾಗಿದ್ದ ಅಪರಿಚಿತ ಪಿಎಫ್ಐ ಕಾರ್ಯಕರ್ತನೊಬ್ಬ ದ್ವಿಚಕ್ರ ವಾಹನದಲ್ಲಿರುವ ಫೋಟೋವನ್ನು ಕೂಡ ಎನ್ಐಎ ಹಂಚಿಕೊಂಡಿದೆ. ಮತ್ತೊಂದೆಡೆ, 2019ರ ಫೆಬ್ರವರಿ 5ರಂದು ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂನಲ್ಲಿ ಪಿಎಫ್ಐನ ಐವರು ವ್ಯಕ್ತಿಗಳುಳ್ಳ ಭಯೋತ್ಪಾದಕ ಗ್ಯಾಂಗ್ ರಾಮಲಿಂಗಂ ಎಂಬವರನ್ನು ಹತ್ಯೆ ಮಾಡಿದ್ದರು. ಆರೋಪಿಗಳನ್ನು ಎಂಡಿ ಐ ಜಿನ್ನಾ, ಅಬ್ದುಲ್ ಮಜಿತ್, ಬುರ್ಕಾನುದ್ದೀನ್, ಶಾಹುಲ್ ಹಮೀದ್ ಮತ್ತು ನಫೀಲ್ ಹಸನ್ ಎಂದು ಗುರುತಿಸಲಾಗಿದ್ದು, ಎಲ್ಲರೂ ತಮಿಳುನಾಡಿನ ನಿವಾಸಿಗಳು ಎಂದು ಎನ್ಐಎ ಮಾಹಿತಿ ನೀಡಿದೆ.
ಇದಲ್ಲದೇ, ಎನ್ಐಎ ಬಿಡುಗಡೆ ಮಾಡಿರುವ ಆರೋಪಿಗಳ ಫೋಟೋದಲ್ಲಿ ಬಿಜೆಪಿ ಯುವ ಮುಖಂಡ ಹಾಗೂ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಐವರು ಆರೋಪಿಗಳು ಕೂಡ ಸೇರಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಾಂತಿ ಹಾಗೂ ಭಯ ಹುಟ್ಟಿಸುವ ಉದ್ದೇಶದಿಂದ ಕೃತ್ಯದಲ್ಲಿ ಭಾಗಿಯಾಗಿದ್ದ ಪ್ರಕರಣದ ಆರೋಪಿಗಳಾದ ಸುಳ್ಯ ತಾಲೂಕಿನ ಬೆಳ್ಳಾರೆಯ ಮೊಹಮ್ಮದ್ ಮುಸ್ತಫಾ, ನಕ್ಕಿಲ್ಯಾಡಿ ಮೂಲದ ಮಸೂದ್ ಅಂಗಡಿ, ಬಂಟ್ವಾಳ ಮೂಲದ ಮೊಹಮ್ಮದ್ ಶರೀಫ್, ಉಮರ್ ಆರ್, ಹಾಗೂ ಬೆಳ್ಳಾರೆ ಮೂಲದ ಅಬೂಬಕ್ಕರ್ ಸಿದ್ದಿಕಿ ಸೇರಿದ್ದಾರೆ. ಈ ಎಲ್ಲಾ ಆರೋಪಿಗಳ ಮಾಹಿತಿ ಸಿಕ್ಕಿದ್ದಲ್ಲಿ ತಕ್ಷಣವೇ ತಿಳಿಸುವಂತೆ ಎನ್ಐಎ ಕೇಳಿಕೊಂಡಿದೆ.
ಇದನ್ನೂ ಓದಿ:ಕರ್ನಾಟಕ, ಮಹಾರಾಷ್ಟ್ರದಲ್ಲಿ ಎನ್ಐಎ ದಾಳಿ; ಐಸಿಸ್ ಬಯಾತ್ ಬೋಧಿಸುತ್ತಿದ್ದ ವ್ಯಕ್ತಿ ಸೇರಿ 15 ಜನರ ಬಂಧನ