ನವದೆಹಲಿ/ಬೆಂಗಳೂರು:ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಬುಧವಾರ ರಾಷ್ಟ್ರವ್ಯಾಪಿ ದಾಳಿ ನಡೆಸಿದ್ದು ಮಾನವ ಕಳ್ಳಸಾಗಣೆಯಲ್ಲಿ ತೊಡಗಿದ್ದ ಐದು ಮಾಡ್ಯೂಲ್‌ಗಳನ್ನು ಭೇದಿಸಿ 44 ಆರೋಪಿಗಳನ್ನು ಬಂಧಿಸಿದೆ. ಭಾರತ-ಬಾಂಗ್ಲಾದೇಶ ಗಡಿಯುದ್ದಕ್ಕೂ ಅಕ್ರಮ ವಲಸಿಗರ ಒಳನುಸುಳುವಿಕೆಗೆ ಸಹಕರಿಸುತ್ತಿದ್ದ ಜಾಲಗಳನ್ನು ಕಿತ್ತುಹಾಕಲು ಎಂಟು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 55 ಸ್ಥಳಗಳಲ್ಲಿ ಗಡಿ ಭದ್ರತಾ ಪಡೆ ಮತ್ತು ರಾಜ್ಯ ಪೊಲೀಸ್ ಪಡೆಗಳ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ ಎಂದು ಎನ್ಐಎ ವಕ್ತಾರರು ಮಾಹಿತಿ ನೀಡಿದ್ದಾರೆ.
ತ್ರಿಪುರಾ, ಅಸ್ಸಾಂ, ಪಶ್ಚಿಮ ಬಂಗಾಳ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಹರಿಯಾಣ, ರಾಜಸ್ಥಾನ ಮತ್ತು ಜಮ್ಮು ಮತ್ತು ಕಾಶ್ಮೀರ ಹಾಗು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೋಧ ನಡೆದಿದೆ. ಬಂಧಿತರ ಪೈಕಿ 21 ಮಂದಿ ತ್ರಿಪುರಾ, ಕರ್ನಾಟಕದಲ್ಲಿ 10, ಅಸ್ಸಾಂನಲ್ಲಿ 5, ಪಶ್ಚಿಮ ಬಂಗಾಳದಲ್ಲಿ 3, ತಮಿಳುನಾಡಿನಲ್ಲಿ 2 ಮತ್ತು ಪುದುಚೇರಿ, ತೆಲಂಗಾಣ ಮತ್ತು ಹರಿಯಾಣದಲ್ಲಿ ತಲಾ ಒಬ್ಬರು ಸೆರೆ ಸಿಕ್ಕಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜಮ್ಮು ಮತ್ತು ಸಾಂಬಾ ಜಿಲ್ಲೆಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮ್ಯಾನ್ಮಾರ್‌ನ ಜಾಫರ್ ಆಲಂ ಎಂದು ಗುರುತಿಸಲಾದ ರೋಹಿಂಗ್ಯಾ ವ್ಯಕ್ತಿ ಸೇರಿದಂತೆ ಇನ್ನೂ ಒಂದೆರಡು ಜನರನ್ನು ಬಂಧಿಸಲಾಗಿದೆ. ಬುಧವಾರ ಬೆಳಿಗ್ಗೆ ದೇಶಾದ್ಯಂತ ಸಂಘಟಿತ ದಾಳಿಗಳನ್ನು ನಡೆಸಲಾಗಿದ್ದು, ಡಿಜಿಟಲ್ ಸಾಧನಗಳು, ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳು ಸೇರಿದಂತೆ ಗುರುತಿನ ಸಂಬಂಧಿತ ದಾಖಲೆಗಳು (ನಕಲಿ ಎಂದು ಶಂಕಿಸಲಾಗಿದೆ), 20 ಲಕ್ಷಕ್ಕೂ ಹೆಚ್ಚು ನಗದು, ವಿದೇಶಿ ಕರೆನ್ಸಿ ಸೇರಿದಂತೆ ವಿವಿಧ ಮಹತ್ವದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಹೇಳಿದೆ.