ನವದೆಹಲಿ:ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ಇಂದು ಬೆಳ್ಳಂಬೆಳಗ್ಗೆ ದೇಶಾದ್ಯಂತ 60ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸುತ್ತಿದೆ. ಮುಖ್ಯವಾಗಿ ಹರಿಯಾಣ, ಪಂಜಾಬ್, ರಾಜಸ್ಥಾನ, ದೆಹಲಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಶೋಧ ಪ್ರಗತಿಯಲ್ಲಿದೆ.
ಮುಖ್ಯವಾಗಿ, ಹತ್ಯೆಯ ಪ್ರಮುಖ ಆರೋಪಿಗಳಾದ ಲಾರೆನ್ಸ್ ಬಿಷ್ಣೋಯ್, ಗೋಲ್ಡೀ ಬ್ರಾರ್ ಅವರಿಗೆ ಸೇರಿರುವ ಅನೇಕ ಸ್ಥಳಗಳಿಗೆ ತನಿಖಾಧಿಕಾರಿಗಳು ತೆರಳಿದ್ದಾರೆ. ಸಿಧು ಮೊಸೆ ವಾಲಾ ಹತ್ಯೆ ಪ್ರಕರಣದಲ್ಲಿ ಭೂಗತ ಲೋಕದ ದುಷ್ಕರ್ಮಿಗಳ ಪಾತ್ರದ ಬಗ್ಗೆ ಮಾಹಿತಿ ಕಲೆ ಹಾಕಲಾಗ್ತಿದೆ.
ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದ ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಕಳೆದ ಮೇ ತಿಂಗಳಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅವರು, ಆಮ್ ಆದ್ಮಿ ಪಕ್ಷದ ಡಾ.ವಿಜಯ್ ಸಿಂಗ್ಲಾ ವಿರುದ್ಧ ಸೋಲು ಕಂಡಿದ್ದರು. ಪಂಜಾಬ್ ಸರ್ಕಾರ ಇವರಿಗೆ ನೀಡಿದ್ದ ಭದ್ರತೆ ವಾಪಸ್ ಪಡೆದುಕೊಂಡಿತ್ತು. ಇದರ ಬೆನ್ನಲ್ಲೇ ಮೂಸೆವಾಲಾ ಮೇಲೆ ಗುಂಡಿನ ದಾಳಿ ನಡೆಸಿ, ಕೊಲೆ ಮಾಡಲಾಗಿದೆ.