ಹೈದರಾಬಾದ್/ವಿಶಾಖಪಟ್ಟಣ: ತೆಲಂಗಾಣ ಮತ್ತು ಆಂಧ್ರಪ್ರದೇಶದ ಹಲವು ಸ್ಥಳಗಳಲ್ಲಿ ಶಂಕಿತ ಮಾವೋವಾದಿ ಬೆಂಬಲಿಗರ ಸುಮಾರು 60ಕ್ಕೂ ಹೆಚ್ಚು ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ದಾಳಿ ನಡೆಸಿದೆ.
ನಾಗರಿಕ ಸ್ವಾತಂತ್ರ್ಯ ಕಾರ್ಯಕರ್ತರು ಮತ್ತು ಅಮರ ಬಂಧು ಮಿತ್ರರ ಸಂಘ, ಕುಲ ನಿರ್ಮೂಲ ಸಮಿತಿ, ಚೈತನ್ಯ ಮಹಿಳಾ ಸಂಘ ಮುಂತಾದ ಸಂಘಟನೆಗಳ ಮುಖಂಡರು, ಅವರ ಸಂಬಂಧಿಕರು ಮತ್ತು ಅವರೊಂದಿಗೆ ನಿಕಟ ಸಂಬಂಧ ಹೊಂದಿರುವ ಜನರ ಮನೆಗಳಲ್ಲಿ ಎನ್‌ಐಎ ಅಧಿಕಾರಿಗಳು ಇಂದು ಬೆಳಗ್ಗೆಯಿಂದಲೇ ಶೋಧ ಕಾರ್ಯ ನಡೆಸಿದ್ದಾರೆ.
ಮಾಹಿತಿ ಆಧರಿಸಿ ಬೆಳಗ್ಗೆಯಿಂದಲೇ ಎನ್ಐಎಯ ಪ್ರತ್ಯೇಕ ಎರಡು ತಂಡಗಳು, ರಾಜ್ಯ ಪೊಲೀಸ್ ಪಡೆಯ ಸಹಾಯದೊಂದಿಗೆ ದಾಳಿ ಆರಂಭಿಸಿವೆ. ತೆಲಂಗಾಣದ ಹೈದರಾಬಾದ್ನಲ್ಲಿ ಹಾಗೂ ಆಂಧ್ರಪ್ರದೇಶದ ಗುಂಟೂರು, ನೆಲ್ಲೂರು ಹಾಗೂ ತಿರುಪತಿ ಮುಂತಾದ ಜಿಲ್ಲೆಗಳಲ್ಲಿ ಎನ್ಐಎ ತಂಡಗಳು ದಾಳಿ ನಡೆಸಿವೆ. ನಕ್ಸಲ್ ಜೊತೆ ನಂಟು ಹೊಂದಿರುವ ಶಂಕೆ ಮೇರೆಗೆ ನಾಗರಿಕ ಹಕ್ಕು ಹೋರಾಟಗಾರರ ಮನೆಗಳಲ್ಲಿ ಎನ್ಐಎ ಶೋಧ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಅವರ ಚಟುವಟಿಕೆಗಳು ಹಾಗೂ ಮಾವೋವಾದಿಗಳೊಂದಿಗೆ ಅವರಿಗೆ ಸಂಪರ್ಕವಿದೆಯಾ ಎನ್ನುವುದರ ಬಗ್ಗೆ ಎನ್ಐಎ ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ. ಸಿಆರ್ಪಿಸಿ ಸೆಕ್ಷನ್ 160ರ ಅಡಿಯಲ್ಲಿ ಅವರಿಗೆ ನೋಟಿಸ್ ನೀಡಲಾಗಿದ್ದು, ಅದರಲ್ಲಿ ಏಜೆನ್ಸಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ. ಹೈದರಾಬಾದ್ನಲ್ಲಿರುವ ಕಾರ್ಯಕರ್ತ ಭವಾನಿ ಹಾಗೂ ವಕೀಲ ಸುರೇಶ್ ಅವರ ಮನೆಗಳಲ್ಲಿ ಕೇಂದ್ರ ತನಿಖಾ ಸಂಸ್ಥೆ ಶೋಧ ನಡೆಸುತ್ತಿದೆ. ಆಂಧ್ರಪ್ರದೇಶದಲ್ಲಿ ವಿಜಯವಾಡ, ಪೊನ್ನೂರು, ಮಂಗಳಗಿರಿ, ಬಾಪಟ್ಲಾ, ನೆಲ್ಲೂರು, ಅಮದಾಲವಲಸ ಮತ್ತು ಅನಂತಪುರದ ವಿವಿಧೆಡೆ ಶೋಧ ಕಾರ್ಯ ನಡೆಯುತ್ತಿದೆ.