ನವದೆಹಲಿ: ಭಯೋತ್ಪಾದಕರು, ಮಾದಕ ವಸ್ತು ಕಳ್ಳಸಾಗಣೆದಾರರು ಮತ್ತು ದರೋಡೆಕೋರರ ಜೊತೆಗಿನ ನಂಟು ಪ್ರಕರಣಗಳಿಗೆ ಸಂಬಂಧಿಸಿದಂತೆ ಹರಿಯಾಣ, ಪಂಜಾಬ್, ರಾಜಸ್ಥಾನ, ಯುಪಿ, ಉತ್ತರಾಖಂಡ ಮತ್ತು ಮಧ್ಯಪ್ರದೇಶ ರಾಜ್ಯಗಳ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ಮಾಡಿದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಶೋಧ ಕಾರ್ಯ ತೀವ್ರಗೊಳಿಸಿದೆ.
ಬೆಳಗ್ಗೆ ಭಯೋತ್ಪಾದನೆ ನಿಧಿ ಪ್ರಕರಣ (ಭಯೋತ್ಪಾದಕರಿಗೆ ಹಣಕಾಸು ಸಹಾಯ ಮಾಡಿದ ಪ್ರಕರಣಗಳು) ತನಿಖೆಯ ಭಾಗವಾಗಿ ಪಂಜಾಬ್‌ನ ಮೋಗಾ ಮತ್ತು ಬಟಿಂಡಾದಲ್ಲಿ ಅಧಿಕಾರಿಗಳು ದಾಳಿ ನಡೆಸಿದೆ. ಹರಿಯಾಣದ ಹಲವೆಡೆ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಲಾಗಿದೆ. ಪಂಜಾಬ್ ಗಡಿ ಜಿಲ್ಲೆಯ ಮೂರು ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ್ದು, ದಾಖಲೆಗಳನ್ನು ಶೋಧಿಸುತ್ತಿದೆ. ಮುಡ್ಕಿ, ತಲವಂಡಿ ಮತ್ತು ಫಿರೋಜ್‌ಪುರದಲ್ಲಿ ಮೂವರ ಮನೆಗಳ ಮೇಲೆ ಎನ್‌ಐಎ ತಂಡ ತೆರಳಿದೆ ಎಂದು ತಿಳಿದುಬಂದಿದೆ. ಇದಲ್ಲದೇ, ಬಟಿಂಡಾದಲ್ಲಿಯೂ ಪರಿಶೀಲನೆ ನಡೆಸಿದ್ದು, ಮನೆಗಳ ಒಳಗೆ ಮತ್ತು ಹೊರ ಹೋಗಲು ಯಾರಿಗೂ ಅವಕಾಶ ನೀಡುತ್ತಿಲ್ಲ. ಕ್ರಿಮಿನಲ್ ಕೇಸ್ ಹೊಂದಿರುವವರ ಮನೆಗಳ ಎನ್‌ಐಎ ಕಣ್ಣಿಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಎರಡು ದಿನಗಳ ಹಿಂದಷ್ಟೇ (ಮೇ. 15) ಭಯೋತ್ಪಾದಕರಿಗೆ ಹಣಕಾಸು ಸಹಾಯ ಮಾಡಿದ ಪ್ರಕರಣಗಳ ತನಿಖೆಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯು ದಕ್ಷಿಣ ಕಾಶ್ಮೀರದ ಪುಲ್ವಾಮಾ ಮತ್ತು ಶೋಪಿಯಾನ್‌ನ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಪಾಕಿಸ್ತಾನಿ ಕಮಾಂಡರ್‌ಗಳು ಅಥವಾ ಹ್ಯಾಂಡ್ಲರ್‌ಗಳ ಆದೇಶದ ಮೇರೆಗೆ ವಿವಿಧ ನಕಲಿ ಹೆಸರುಗಳ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಭಯೋತ್ಪಾದಕ ಗುಂಪುಗಳಿಗೆ ಹಣಕಾಸು ಒದಗಿಸಿದ ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ ಪ್ರಕರಣದ ತನಿಖೆ ಇದಾಗಿತ್ತು.