ಚೆನೈ/ ಮುಂಬೈ: ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಬಿಹಾರ ಭೇಟಿ ವೇಳೆ ಗಲಭೆ ನಡೆಸಲು ಸಂಚು ರೂಪಿಸಿದ ಆರೋಪ ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳು ದೇಶದ ವಿವಿದೆಡೆ ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರ, ಉತ್ತರಪ್ರದೇಶ, ರಾಜಸ್ಥಾನ , ದೆಹಲಿ, ತಮಿಳುನಾಡು ಮತ್ತು ಮಧ್ಯಪ್ರದೇಶದಲ್ಲಿ ಎನ್ಐಎ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ. ಎನ್ಐಎ ಅಧಿಕಾರಿಗಳು ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮುಖಂಡರ ಮನೆ ಮೇಲೆ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ಆರು ರಾಜ್ಯಗಳಲ್ಲಿ ಎನ್ಐಎ ಕಾರ್ಯಾಚರಣೆ: ದೇಶದ ಆರು ರಾಜ್ಯಗಳಲ್ಲಿ ಎನ್ಐಎ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ರಾಜಸ್ಥಾನದ ಟೋಂಕ್, ಕೋಟಾ, ಗಂಗಾಪುರ್ ಮತ್ತು ದೆಹಲಿಯ ಹೌಝ್ ಕಾಜಿ, ಬಲ್ಲಿಮಾರನ್ ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದೆ. ಮಹಾರಾಷ್ಟ್ರದಲ್ಲಿ ಮುಂಬೈ, ಥಾಣೆ, ನವಿ ಮುಂಬೈ, ಭೀವಂಡಿ ಜಿಲ್ಲೆಗಳಲ್ಲೂ ಎನ್ಐಎ ಆಧಿಕಾರಿಗಳು ಶೋಧ ನಡೆಸಿದ್ದಾರೆ. ಇದುವರೆಗೆ ಐದರಿಂದ ಏಳು ಜನರನ್ನು ಬಂಧಿಸಿದೆ ಎಂದು ವರದಿಯಾಗಿದೆ.
ತಮಿಳುನಾಡಿನಲ್ಲಿ ಎನ್ಐಎ ದಾಳಿ: ತಮಿಳುನಾಡಿನ ಮಧುರೈ ಜಿಲ್ಲೆಯ ಹಲವು ಕಡೆಗಳಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಲ್ಲಿನ ಕಜಿಮಾರ್ ಸ್ಟ್ರೀಟ್ನಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಜಮಾತ್ ಹಿಂದ್ ಮೂವ್ಮೆಂಟ್ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ತಾಜುದ್ದೀನ್ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಸಂಘಟನೆ ಹಲವರು ಸರ್ಕಾರದ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವುದಾಗಿ ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.