ಬುದ್ಗಾಮ್ (ಜಮ್ಮು ಮತ್ತು ಕಾಶ್ಮೀರ):ಭಯೋತ್ಪಾದಕ ಕೃತ್ಯ ಸಂಚಿನ ಪ್ರಕರಣ ಹಾಗೂ ಹೊಸದಾಗಿ ರೂಪುಗೊಂಡ ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು (ಎನ್ಐಎ) ಬುಧವಾರ ಕಾಶ್ಮೀರದ ಬುದ್ಗಾಮ್ ಮತ್ತು ಶ್ರೀನಗರ ಜಿಲ್ಲೆಗಳಲ್ಲಿ ಹಲವು ಕಡೆ ದಾಳಿ ನಡೆಸಿದೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸಿಆರ್ಪಿಎಫ್ ಸಹಯೋಗದೊಂದಿಗೆ ಎನ್ಐಎ ದಾಳಿ ನಡೆಸಿದ್ದು, ಗುಲಾಂ ಹಸನ್ ಭಟ್ ಪುತ್ರ ಫಾರೂಕ್ ಅಹ್ಮದ್ ಭಟ್ ಮತ್ತು ದಿವಂಗತ ಅಬ್ದುಲ್ ಹಮೀದ್ ದಾರ್ ಅವರ ಪುತ್ರ ಹುಬೇರ್ ಅಹ್ಮದ್ ದಾರ್ ಅವರ ಮನೆಯಲ್ಲಿ ಶೋಧ ನಡೆಸಿದ್ದಾರೆ.
ಈ ಬಗ್ಗೆ ಎನ್ಐಎ ಅಧಿಕಾರಿಯೊಬ್ಬರು ಮಾತನಾಡಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸದಾಗಿ ಕೆಲವೊಂದು ಭಯೋತ್ಪಾದಕ ಸಂಘಟನೆಗಳು ಹುಟ್ಟುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಇದರಿಂದ ಕೆಲವು ಕಡೆ ದಾಳಿ ನಡೆಸಿ ಹಲವಾರು ಡಿಜಿಟಲ್ ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ. ಲಷ್ಕರ್-ಎ-ತೊಯ್ಬಾ (LET) ನಂತಹ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆಗಳಂತೆ ಬೇರೆ ಬೇರೆ ಹೆಸರಿನಲ್ಲಿ ಹೊಸದಾಗಿ ರೂಪುಗೊಂಡು ಶಾಖೆಗಳು ಮತ್ತು ಅಂಗಸಂಸ್ಥೆಗಳನ್ನು ಹೊಂದಿರುವ ಬಗ್ಗೆ ತಿಳಿದು ದಾಳಿ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಹೊಸದಾಗಿ ರೂಪಗೊಂಡ ಸಂಘಟನೆಗಳು ದಿ ರೆಸಿಸ್ಟನ್ಸ್ ಫ್ರಂಟ್ (ಟಿಆರ್ಎಫ್), ಯುನೈಟೆಟ್ ಲಿಬರೇಶನ್ ಫ್ರಂಟ್, ಜಮ್ಮು ಮತ್ತು ಕಾಶ್ಮೀರ್ ಫ್ರೀಡಂ ಫೈಟರ್ಸ್, ಕಾಶ್ಮೀರ್ ಟೈಗರ್ಸ್ ಎಂದು ತಿಳಿಸಿದರು. ಈ ಸಂಘಟನೆಗಳು ಯುವಕರ ತಲೆಕೆಡಿಸಿ ತಮ್ಮ ಸಂಘಟನೆಗೆ ಸೇರಿಸಿಕೊಂಡು ನಂತರ ಭಯೋತ್ಪಾದಕಾ ಕೃತ್ಯಗಳಿಗೆ ಬಳಸಿಕೊಳ್ಳುತ್ತಾರೆ. ಈ ಸಂಘಟನೆಗಳ ಬಗ್ಗೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಹಲವಾರು ದಿನಗಳಿಂದ ವಿಚಾರಣೆ ನಡೆಸುತ್ತಿದ್ದು ಸುಮಾರು 51 ಕಡೆ ದಾಳಿ ನಡೆಸಿದೆ.
ಹೊಸದಾಗಿ ರೂಪುಗೊಂಡ ಸಂಘಟನೆಗಳು ಮ್ಯಾಗ್ನೆಟಿಕ್ ಬಾಂಬ್, ಐಇಡಿಗಳು, ಮಾಧಕ ವಸ್ತುಗಳ ಸಾಗಣೆ ಮತ್ತು ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳ ಸಂಗ್ರಹ ಮಾಡುತ್ತಿದ್ದಾರೆ ಎಂಬುದು ತಿಳಿದು ಬಂದಿದೆ ಎಂದು ಎನ್ಐಎ ಅಧಿಕಾರಿಗಳು ಮಾಹಿತಿ ನೀಡಿದರು.
ಕೇರಳ, ಕರ್ನಾಟಕ ಹಾಗೂ ಬಿಹಾರದಲ್ಲೂ ದಾಳಿ:ಭಯೋತ್ಪಾದಕ ಕೃತ್ಯಗಳಿಗೆ ಗಲ್ಫ್ ರಾಷ್ಟ್ರಗಳಿಂದ ಹವಾಲಾ ಹಣ ಬಳಕೆ, ದಕ್ಷಿಣ ಭಾರತದ ಪಿಎಫ್ಐ ಹವಾಲಾ ಹಣ ಜಾಲ, ಭಾರತದಲ್ಲಿ ಭಯೋತ್ಪಾದನೆಗೆ ಫಂಡಿಂಗ್ ಮಾಡುತ್ತಿದ್ದ ಹವಾಲಾ ನೆಟ್ವರ್ಕ್ ಪತ್ತೆ ಕಾರ್ಯ, ಬಿಹಾರದ ಪಾಟ್ನಾದಲ್ಲಿ 2022ರ ಜುಲೈ ತಿಂಗಳಲ್ಲಿನ ಫುಲ್ವಾರಿ ಶರೀಫ್ ಪ್ರಕರಣ ಹಾಗೂ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣ ಸೇರಿದಂತೆ ದೇಶದಲ್ಲಿ ಕೋಮು ಗಮಭೆ ಸೃಷ್ಠಿಸಲು ಯತ್ನಿಸಿದ ಆರೋಪಗಳೆಲ್ಲವೂ ಸೇರಿ ವಿವಿಧ ಪ್ರಕರಣಗಳ ತನಿಖೆಯ ಜಾಡು ಹಿಡಿದು ರಾಷ್ಟ್ರೀಯ ತನಿಖಾ ದಳವು ಬುಧವಾರ ಕೇರಳ ಕರ್ನಾಟಕ ಮತ್ತು ಬಿಹಾರ ರಾಜ್ಯಗಳ ಅನೇಕ ಕಡೆ ದಾಳಿ ನಡೆಸಿ ಮಹತ್ವದ ಮಾಹಿತಿ ಕಲೆ ಹಾಕಿದೆ.
ಇದನ್ನೂ ಓದಿ:ಮೋದಿ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು: ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ ಎನ್ಐಎ ದಾಳಿ