ನವದೆಹಲಿ:ಭಯೋತ್ಪಾದಕರು, ದರೋಡೆಕೋರ ಜತೆ ಮಾದಕ ಕಳ್ಳಸಾಗಣೆದಾರರು ನಂಟು ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಇಂದು ಭರ್ಜರಿ ಕಾರ್ಯಾಚರಣೆ ಕೈಗೊಂಡಿದೆ. ಉಗ್ರರರನ್ನು ಮಟ್ಟಹಾಕಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಗುರುವಾರ ದೆಹಲಿ, ಹರಿಯಾಣ ಮತ್ತು ಪಂಜಾಬ್‌ನ 32 ಸ್ಥಳಗಳಲ್ಲಿ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಗ್ಗೆಯಿಂದಲೇ ವಿವಿಧೆಡೆ ದಾಳಿ ನಡೆಸಲಾಗಿದೆ. ಭಯೋತ್ಪಾದನಾ ವಿರೋಧಿ ಏಜೆನ್ಸಿಯ ಅನೇಕ ತಂಡಗಳು, ರಾಜ್ಯ ಪೊಲೀಸ್ ಪಡೆಗಳ ಭದ್ರತೆಯಲ್ಲಿ ಹುಡುಕಾಟ ನಡೆಸಿವೆ.
ಆರೋಪಿಗಳ ಆಸ್ತಿ ಮುಟ್ಟುಗೋಲು: ಹರಿಯಾಣದ ಝಜ್ಜರ್ ಮತ್ತು ಸೋನಿಪತ್ ಇತರ ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ನಟೋರಿಯಸ್ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರ ಸಂಘಟಿತ ಭಯೋತ್ಪಾದನೆ ಹಾಗೂ ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ, ವಿವಿಧ ಪ್ರದೇಶಗಳಲ್ಲಿ ಅಧಿಕಾರಿಗಳು ತೀವ್ರ ತಪಾಸಣೆ ಕೈಗೊಂಡಿದ್ದಾರೆ. ಜನವರಿ 6 ರಂದು ಲಾರೆನ್ಸ್ ಬಿಷ್ಣೋಯ್ ಒಡೆತನದ ನಾಲ್ಕು ಆಸ್ತಿಗಳನ್ನು ಎನ್ಐಎ ಮುಟ್ಟುಗೋಲು ಹಾಕಿಕೊಂಡಿತ್ತು. ಈಗ ಮತ್ತೆ ದಾಳಿಗಳನ್ನು ಮಾಡಲಾಗಿದೆ.
ಈ ಆಸ್ತಿಗಳಲ್ಲಿ ಮೂರು ಸ್ಥಿರ ಮತ್ತು ಒಂದು ಚರಾಸ್ತಿ ಸೇರಿವೆ. ಈ ಹಿಂದೆ 1967ರ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ನಿಬಂಧನೆಗಳ ಅಡಿ ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ NIA ತಂಡಗಳು ಈ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಈ ಎಲ್ಲ ಆಸ್ತಿಗಳು ಭಯೋತ್ಪಾದನೆಯ ಸಂಚು ರೂಪಿಸಲು ಮತ್ತು ಗಂಭೀರ ಅಪರಾಧಗಳನ್ನು ಕಾರ್ಯಗತಗೊಳಿಸಲು ಬಳಸಲಾಗುತ್ತಿತ್ತು ಎಂದು ಕಂಡುಕೊಂಡಿರುವ ಎನ್ಐಎ, ಇಂತಹ ಆಸ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ಭಯೋತ್ಪಾದಕ ಗ್ಯಾಂಗ್‌ನ ಆಶ್ರಯದಾತ ವಿಕಾಸ್ ಸಿಂಗ್‌ಗೆ ಸೇರಿದ ಫ್ಲಾಟ್-77/4, ಆಶ್ರಯ-1, ಸುಲಭ್ ಆವಾಸ್ ಯೋಜನೆ, ಸೆಕ್ಟರ್-1, ಗೋಮತಿ ನಗರ ವಿಸ್ತರಣೆ, ಉತ್ತರ ಪ್ರದೇಶದ ಲಕ್ನೋ ಸೇರಿದಂತೆ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.
ಎನ್‌ಐಎ ತನಿಖೆಯಿಂದ ಬಹಿರಂಗವಾದ ಮಾಹಿತಿ:ಎನ್‌ಐಎ ತನಿಖೆಯ ಪ್ರಕಾರ, ವಿಕಾಸ್ ಸಿಂಗ್, ಲಾರೆನ್ಸ್ ಬಿಷ್ಣೋಯ್ ಅವರ ಸಹವರ್ತಿಯಾಗಿದ್ದು, ಪಂಜಾಬ್ ಪೊಲೀಸ್ ಪ್ರಧಾನ ಕಚೇರಿಯ ಮೇಲೆ ರಾಕೆಟ್-ಪ್ರೊಪೆಲ್ಡ್ ಗ್ರೆನೇಡ್ (ಆರ್‌ಪಿಜಿ) ದಾಳಿಯಲ್ಲಿ ಭಾಗಿಯಾಗಿರುವ ಆರೋಪಿಗಳು ಸೇರಿದಂತೆ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದರು.