ನವದೆಹಲಿ:ಉಗ್ರಗಾಮಿ ಸಂಘಟನೆಯಾದ ಐಸಿಸ್ ಚಟುವಟಿಕೆಗಳು ಮತ್ತು ಸಂಘಟನೆಗೆ ಯುವಕರ ನೇಮಕ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಮಿಳುನಾಡು ಮತ್ತು ತೆಲಂಗಾಣದ 31 ಸ್ಥಳಗಳ ಮೇಲೆ ಶನಿವಾರ ದಾಳಿ ನಡೆಸಿತು. ಕಾರ್ಯಾಚರಣೆಯಲ್ಲಿ 60 ಲಕ್ಷ ರೂಪಾಯಿ, 18,200 ಅಮೆರಿಕನ್ ಡಾಲರ್, ಹಲವಾರು ಡಿಜಿಟಲ್ ಸಾಧನಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯ ವೇಳೆ ಸಿಕ್ಕ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಹಾರ್ಡ್ ಡಿಸ್ಕ್‌ಗಳಲ್ಲಿನ ಮಾಹಿತಿಯನ್ನು ಪರಿಶೀಲಿಸಲಾಗುವುದು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ ವಕ್ತಾರರು ತಿಳಿಸಿದರು. ಇದೇ ವೇಳೆ 60 ಲಕ್ಷ ರೂಪಾಯಿ ಭಾರತೀಯ ಕರೆನ್ಸಿ ಮತ್ತು 18,200 ಅಮೆರಿಕನ್ ಡಾಲರ್‌ಗಳ ಜೊತೆಗೆ ಅರೇಬಿಕ್ ಮತ್ತು ಸ್ಥಳೀಯ ಭಾಷೆಗಳಲ್ಲಿನ ಪುಸ್ತಕಗಳೂ ಸಹ ಶೋಧದ ಸಮಯದಲ್ಲಿ ಸಿಕ್ಕಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಂಕಿತರ ವಿಚಾರಣೆ:ಎನ್‌ಐಎ ತಂಡವು ತಮಿಳುನಾಡಿನ ಚೆನ್ನೈ, ಕೊಯಮತ್ತೂರು ಮತ್ತು ತೆಂಕಶಿಯ ಶಂಕಿತ ಉಗ್ರರ ನಿವಾಸಗಳ ಮೇಲೆ ದಾಳಿ ನಡೆಸಿತು. ಕೆಲವರನ್ನು ವಶಕ್ಕೆ ಪಡದು ಐದು ಗಂಟೆಗಳ ಕಾಲ ಅವರನ್ನು ವಿಚಾರಣೆ ನಡೆಸಿತು. ದಾಳಿ ವೇಳೆ ಇವರುಗಳ ಮನೆಯಲ್ಲಿ ಡಿಜಿಟಲ್ ಸಾಧನಗಳೂ ಸಿಕ್ಕಿವೆ ಎಂದು ಎನ್‌ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜೊತೆಗೆ ಎಲ್ಲರನ್ನೂ ಸೆಪ್ಟೆಂಬರ್ 20 ರಂದು ಚೆನ್ನೈನಲ್ಲಿರುವ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಕರೆದಿದ್ದಾರೆ.
ಎಲ್ಲೆಲ್ಲಿ ದಾಳಿ:ಎನ್‌ಐಎ ತಂಡ ಕೊಯಮತ್ತೂರಿನ 22 ಸ್ಥಳಗಳು, ಚೆನ್ನೈನ 3 ಮತ್ತು ತಮಿಳುನಾಡಿನ ತೆಂಕಶಿ ಜಿಲ್ಲೆಯ ಕಡಯನಲ್ಲೂರಿನ 1 ಸ್ಥಳದಲ್ಲಿ ಮುಂಜಾನೆ ದಾಳಿ ನಡೆಸಿತು. ಇದರ ಜೊತೆಗೆ ಹೈದರಾಬಾದ್, ಸೈಬರಾಬಾದ್ ಸೇರಿ ತೆಲಂಗಾಣದ ಐದು ಸ್ಥಳಗಳಲ್ಲಿ ಶೋಧ ನಡೆಸಿತು.