ನವದೆಹಲಿ: ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್)ನೊಂದಿಗೆ ಸಂಪರ್ಕ ಹೊಂದಿರುವ ಗಂಭೀರ ಆರೋಪದಡಿ ದೇಶದ ಮೂರು ನಗರಗಳಲ್ಲಿ 10ಕ್ಕೂ ಹೆಚ್ಚು ಶಂಕಿತರ ಮೇಲೆ ರಾಷ್ಟ್ರೀಯ ತನಿಖಾ ದಳ ನಿಗಾ ವಹಿಸಿದೆ. ಈ ಮೂರು ನಗರಗಳ ಪೈಕಿ ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಕರಾವಳಿ ನಗರ ಮಂಗಳೂರು ಸೇರಿದೆ.
ಈ ಕುರಿತು ದೆಹಲಿಯಲ್ಲಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಎನ್‌ಐಎ ಹಿರಿಯ ಅಧಿಕಾರಿ, ಈ ಶಂಕಿತರೆಲ್ಲಾ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಲು ಹಣ ಸಂಗ್ರಹಿಸುವುದರ ಜೊತೆಗೆ, ಅಮಾಯಕ ಯುವಕರನ್ನು ಉಗ್ರ ಸಂಘಟನೆಗೆ ನೇಮಿಸಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.
ಬೆಂಗಳೂರು, ಮಂಗಳೂರು ಹಾಗೂ ಕಾಶ್ಮೀರದಲ್ಲಿ ಕೆಲವರು ಇಸ್ಲಾಮಿಕ್ ಸ್ಟೇಟ್ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದಾರೆ. ಈ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಎನ್‌ಐಎ ಈ 3 ನಗರಗಳ ಐದು ಸ್ಥಳಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿ, ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದಲ್ಲಿ 7 ಮಂದಿಯನ್ನು ಬಂಧಿಸಿತ್ತು.