ನವದೆಹಲಿ: ಭಯೋತ್ಪಾದನೆಗೆ ಆರ್ಥಿಕ ಸಹಾಯ ಮಾಡಿರುವ ಪ್ರಕರಣದಲ್ಲಿ ಕಾಶ್ಮೀರದ ಪ್ರತ್ಯೇಕತಾವಾದಿ ಹೋರಾಟಗಾರ ಯಾಸೀನ್ ಮಲಿಕ್ ದೋಷಿ ಎಂದು ಈಗಾಗಲೇ ಎನ್‌ಐಎ ಕೋರ್ಟ್ ಘೋಷಣೆ ಮಾಡಿದ್ದು, ಇದರ ಬೆನ್ನಲ್ಲೇ ಇಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಿದೆ. ಯಾಸಿನ್ ಮಲಿಕ್‌ಗೆ ಮರಣದಂಡನೆ ವಿಧಿಸುವಂತೆ ಎನ್‌ಐಎ ವಿಶೇಷ ಕೋರ್ಟ್ನ ನ್ಯಾಯಾಧೀಶ ಪ್ರವೀಣ್ ಸಿಂಗ್ ಅವರಿಗೆ ಮನವಿ ಸಲ್ಲಿಕೆ ಮಾಡಲಾಗಿತ್ತು. ಇದರ ಬಗ್ಗೆ ವಿಚಾರಣೆ ನಡೆಸಿದ ದೆಹಲಿ ಎನ್‌ಐಎ ಕೋರ್ಟ್, ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಇದರ ಬೆನ್ನಲ್ಲೇ ಶಿವಸೇನೆ ಸಂಭ್ರಮಾಚರಣೆ ಮಾಡಿದ್ದು, ಯಾಸಿನ್ ಮಲಿಕ್ ಬೆಂಬಲಿಗರು ಪ್ರತಿಭಟನೆ ನಡೆಸಿದರು.
ಯಾಸಿನ್ ಮಲಿಕ್ 2019ರಿಂದಲೂ ದೆಹಲಿಯ ತಿಹಾರ್ ಜೈಲಿನಲ್ಲಿದ್ದು, ಅವರ ವಿರುದ್ಧ ಯುಎಪಿಎ ಕಾಯ್ದೆಯ ಸೆಕ್ಷನ್ 16 (ಭಯೋತ್ಪಾದನಾ ಕೃತ್ಯ), ಭಯೋತ್ಪಾದನಾ ಚಟುವಟಿಕೆಗೆ ಹಣಕಾಸು ಸಂಗ್ರಹ), ಭಯೋತ್ಪಾದನಾ ಕೃತ್ಯ ಎಸಗಲು ಸಂಚು ಮತ್ತು ಭಯೋತ್ಪಾದನಾ ಗುಂಪು ಅಥವಾ ಸಂಘಟನೆಯ ಸದಸ್ಯನಾಗಿರುವುದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-B (ಅಪರಾಧ ಸಂಚು) ಮತ್ತು 124-A (ದೇಶದ್ರೋಹ) ಪ್ರಕರಣಗಳನ್ನು ದಾಖಲಿಸಲಾಗಿದೆ. ತಮ್ಮ ಮೇಲೆ ದಾಖಲಾದ ಆರೋಪಗಳ ಸಂಬಂಧ ಮೇ 10 ರಂದು ಕೋರ್ಟ್‍ನಲ್ಲಿ ಮಲ್ಲಿಕ್ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ದೋಷಿ ಎಂದು ಪ್ರಕಟಿಸಲಾಗಿತ್ತು.
ಯಾಸಿನ್ ಮಲಿಕ್ ವಿರುದ್ಧ 2017ರಲ್ಲಿ ಕಾಶ್ಮೀರ ಕಣಿವೆಯಲ್ಲಿ ನಡೆದ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದ ಚಟುವಟಿಕೆಯ ಆರೋಪಕ್ಕೆ ಸಂಬಂಧಿಸಿದಂತೆ ಈ ಪ್ರಕರಣ ದಾಖಲಾಗಿದೆ. ಈಗಾಗಲೇ ಅವರನ್ನ ಕೋರ್ಟ್ಗೆ ಕರೆತರಲಾಗಿದೆ.