ನವದೆಹಲಿ : ದೇಶದ ಒಳಗಿನ ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಎನ್ಐಎ(ರಾಷ್ಟ್ರೀಯ ತನಿಖಾ ದಳ) ಐವರು ಖಲಿಸ್ತಾನಿ ಭಯೋತ್ಪಾದಕರ ಮಾಹಿತಿ ನೀಡಿದವರಿಗೆ ನಗದು ಬಹುಮಾನವನ್ನು ಘೋಷಿಸಿದೆ. ಐವರು ಖಲಿಸ್ತಾನಿ ಭಯೋತ್ಪಾದಕರ ಕುರಿತು ಸುಳಿವು ನೀಡಿದವರಿಗೆ 5 ಲಕ್ಷ ಮತ್ತು 10 ಲಕ್ಷ ನಗದು ಬಹುಮಾನ ನೀಡುವುದಾಗಿ ಘೋಷಣೆ ಎನ್ಐಎ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಎನ್ಐಎ, ಉಗ್ರ ಪಟ್ಟಿಯಲ್ಲಿರುವ ಖಲಿಸ್ತಾನಿ ಉಗ್ರರಾದ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾ ಮತ್ತು ಲಖ್ಬೀರ್ ಸಿಂಗ್ ಸಂಧು ಅಲಿಯಾಸ್ ಲಾಂಡಾ ಕುರಿತು ಮಾಹಿತಿ ನೀಡಿದವರಿಗೆ ತಲಾ 10 ಲಕ್ಷ ರೂಪಾಯಿ ನೀಡಲಾಗುವುದು ಎಂದು ತಿಳಿಸಿದೆ. ಈ ಆರೋಪಿಗಳು ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ)ಸಂಘಟನೆ ಮೂಲಕ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎಂದು ಎನ್ಐಎ ಹೇಳಿದೆ.
ಜೊತೆಗೆ ಈ ಇಬ್ಬರು ಉಗ್ರರ ಮೂವರು ಸಹಚರರ ಕುರಿತು ಮಾಹಿತಿ ನೀಡಿದವರಿಗೆ ತಲಾ 5 ಲಕ್ಷ ರೂ. ಬಹುಮಾನವನ್ನು ಘೋಷಿಸಲಾಗಿದೆ. ಸಹಚರರಾದ ಪರ್ಮಿಂದರ್ ಸಿಂಗ್ ಕೈರಾ ಅಲಿಯಾಸ್ ಪಟ್ಟು, ಸತ್ನಾಮ್ ಸಿಂಗ್ ಅಲಿಯಾಸ್ ಸತ್ಬೀರ್ ಸಿಂಗ್ ಅಲಿಯಾಸ್ ಸತ್ನಾ ಮತ್ತು ಯದ್ವಿಂದರ್ ಸಿಂಗ್ ಅಲಿಯಾಸ್ ಯಡ್ಡಾ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ ಐದು ಲಕ್ಷ ರೂಪಾಯಿ ನಗದು ಬಹುಮಾನವನ್ನು ಎನ್ಐಎ ಘೋಷಿಸಿದೆ.