ಕೊಚ್ಚಿ (ಕೇರಳ) : ಕೇರಳದ ಕೋಯಿಕ್ಕೋಡ್ ಎಲತ್ತೂರ್ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ದೋಷಾರೋಪಪಟ್ಟಿಯನ್ನು ಸಲ್ಲಿಸಿದೆ. ಕೊಚ್ಚಿಯ ಎನ್ಐಎ ನ್ಯಾಯಾಲಯಕ್ಕೆ ಅಧಿಕಾರಿಗಳು ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣ ಪ್ರಮುಖ ಆರೋಪಿ ದೆಹಲಿ ಮೂಲಕ ಶಾರುಖ್ ಸೈಫಿ ಎಂಬಾತ ಏಕಾಂಗಿಯಾಗಿ ಕೃತ್ಯ ಎಸಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಏಪ್ರಿಲ್ 02ರಂದು ಆರೋಪಿ ಶಾರುಖ್ ಸೈಫಿ, ಆಲಪ್ಪುಳ - ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಕನೊಬ್ಬನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದನು. ಘಟನೆಯಲ್ಲಿ ಮೂವರು ಮೃತಪಟ್ಟು, 9 ಮಂದಿಗೆ ಸುಟ್ಟಗಾಯಗಳಾಗಿತ್ತು. ಅಂದು ರಾತ್ರಿ 9.45 ಸುಮಾರಿಗೆ ರೈಲು ಕೋಯಿಕ್ಕೋಡ್ ನಗರ ದಾಟಿ ಇಲ್ಲಿನ ಕೊರಪುಳ ಸೇತುವೆ ಸಂಚರಿಸುವ ಮಧ್ಯೆ ಆರೋಪಿ ಕೃತ್ಯ ಎಸಗಿದ್ದನು. ಬಳಿಕ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಶಾರುಖ್ ಸೈಫಿಯನ್ನು ಕೇಂದ್ರ ಗುಪ್ತಚರ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಬಂಧಿಸಿದ್ದರು.
ಆರೋಪಿಯು ಆನ್ಲೈನ್ನಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಆಕರ್ಷಿತನಾಗಿ ಕೃತ್ಯ ಎಸಗಿದ್ದಾನೆ. ಜಿಹಾದಿ ಚಟುವಟಿಕೆಯ ಭಾಗವಾಗಿ ಆರೋಪಿಯು ಯೋಜನೆ ರೂಪಿಸಿ ರೈಲಿಗೆ ಬೆಂಕಿ ಹಚ್ಚಿದ್ದಾನೆ. ಅಪರಾಧದಿಂದ ಗುರುತಿಸಿಕೊಳ್ಳದಿರಲು ಆರೋಪಿಯು ಕೇರಳವನ್ನು ಆಯ್ಕೆ ಮಾಡಿದ್ದಾನೆ ಎಂದು ಅಧಿಕಾರಿಗಳು ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ :ಕೇರಳದ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿ ಯೂಟ್ಯೂಬರ್ ಪೆಟ್ರೋಲ್ ಖರೀದಿಸಿದ್ದು ಎಲ್ಲಿ ಗೊತ್ತಾ?