ಲಖನೌ: ಉತ್ತರಪ್ರದೇಶದಲ್ಲಿ ಐಇಡಿಸ್ಫೋಟ ಘಟನೆಗೆ ಸಂಬಂಧಿಸಿದಂತೆ ಹಾಗೂ ಶಸ್ತ್ರಾಸ್ತ್ರಗಳನ್ನು ಸಂಗ್ರಹಣೆ ಮತ್ತು ಸಂಚು ರೂಪಿಸಿದ್ದಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯು ಐವರು ಅನ್ಸಾರ್ ಘಜ್ವತ್-ಉಲ್-ಹಿಂದ್ ಸದಸ್ಯರಾದ ಮುಸೀರುದ್ದೀನ್, ಮಿನ್ಹಾಜ್ ಅಹ್ಮದ್, ಶಕೀಲ್, ಮುಸ್ತಕೀಮ್ ಮತ್ತು ಮೊಹಮ್ಮದ್ ಮೊಯಿದ್ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ.
ಭಯೋತ್ಪಾದಕರು ಅಲ್ ಖೈದಾ ಕಾರ್ಯಕರ್ತರೊಂದಿಗೂ ಸಂಪರ್ಕ ಹೊಂದಿದ್ದರು ಎಂದು ಈ ಮೂಲಕ ತಿಳಿದು ಬಂದಿದೆ. ಯುಪಿಯ ಭಯೋತ್ಪಾದನಾ ನಿಗ್ರಹ ದಳವು ಜುಲೈ 11ರಂದು ಗೋಮತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ಪ್ರಾಥಮಿಕ ತನಿಖೆಯ ನಂತರ ಈ ತನಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಹಸ್ತಾಂತರಿಸಲಾಯಿತು.
ಅದರಂತೆ ಜುಲೈ 29, 2021ರಂದು ಎನ್‌ಐಎ ಎರಡನೇ ಪ್ರಕರಣವನ್ನು ದಾಖಲಿಸಿ, ಈ ವಿಷಯದ ಬಗ್ಗೆ ಹೆಚ್ಚನ ತನಿಖೆ ಪ್ರಾರಂಭಿಸಿತು. ಆರೋಪಿ ಮಿನ್ಹಾಜ್ ಅಹ್ಮದ್‌ನನ್ನು ಜಮ್ಮು ಮತ್ತು ಕಾಶ್ಮೀರ ಮೂಲದ ಇಬ್ಬರು ಅಲ್‌ಖೈದಾ ಭಯೋತ್ಪಾದಕರು ಆನ್‌ಲೈನ್‌ನಲ್ಲಿಯೇ ತೀವ್ರಗಾಮಿಯನ್ನಾಗಿ ಮಾಡಿದ್ದಾರೆ ಎಂದು ಎನ್‌ಐಎ ತನ್ನ ತನಿಖಾ ಸಂಶೋಧನೆಗಳಲ್ಲಿ ಉಲ್ಲೇಖಿಸಿದೆ.