ನವದೆಹಲಿ:ಐಎಸ್‌ಐಎಸ್ ಅನ್ನು ದಮನ ಮಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ದೊಡ್ಡ ಹೊಡೆತವನ್ನೇ ಕೊಟ್ಟಿದೆ. ಭಯೋತ್ಪಾದಕ ಕೃತ್ಯಗಳಿಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನರನ್ನು ದೋಷಿಗಳೆಂದು ಲಕ್ನೋದ ವಿಶೇಷ ನ್ಯಾಯಾಲಯ ಘೋಷಿಸಿದೆ.
2017ರಲ್ಲಿ ಕಾನ್ಪುರ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳು, ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಈ ಐಸಿಸ್ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಎಂಟು ಆರೋಪಿಗಳ ವಿರುದ್ಧದ ಪ್ರಕರಣವನ್ನು 2017ರ ಮಾರ್ಚ್ 8ರಂದು ಲಕ್ನೋದ ಪೊಲೀಸ್ ಠಾಣೆ, ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನಲ್ಲಿ ದಾಖಲಿಸಲಾಗಿತ್ತು. ಮಾರ್ಚ್ 14ರಂದು ಎನ್ಐಎನಿಂದ ಮತ್ತೊಮ್ಮೆ ದೂರು ದಾಖಲು ಮಾಡಲಾಗಿತ್ತು. ಪ್ರಕರಣದ ಕುರಿತು ಶಿಕ್ಷೆಯ ಪ್ರಮಾಣವನ್ನು ಎನ್ಐಎ ನ್ಯಾಯಾಲಯ ಸೋಮವಾರ (ಫೆ.27) ಪ್ರಕಟಿಸಲಿದೆ.
ಪತ್ತೆಯಾಗಿದ್ದ ಸುಧಾರಿತ ಸ್ಫೋಟಕ ಸಾಧನಗಳು:ಆರೋಪಿಗಳು ಕೆಲವು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಸಿದ್ಧಪಡಿಸಿ ಪರೀಕ್ಷೆಗೆ ಒಳಪಡಿಸಿದ್ದರು. ಯುಪಿಯ ವಿವಿಧ ಸ್ಥಳಗಳಲ್ಲಿ ಅವುಗಳನ್ನು ಬಳಸಲು ಸ್ಥಾಪಿಸಲು ವಿಫಲರಾಗಿದ್ದರು ಎಂದು ಎನ್ಐಎ ತನಿಖೆಯಿಂದ ಬಹಿರಂಗವಾಗಿತ್ತು. ಅವರ ಹಾಜಿ ಕಾಲೋನಿ (ಲಕ್ನೋ) ಅಡಗುತಾಣದಿಂದ ವಶಪಡಿಸಿಕೊಂಡ ಬಾಂಬ್ ತಯಾರಿಕೆ ಸೇರಿಂದತೆ ವಿವಿಧ ಮಾಹಿತಿಗಳು ದೊರೆತಿದ್ದವು. ಆರೋಪಿಗಳು ಐಇಡಿಗಳನ್ನು ತಯಾರಿಸುತ್ತಿರುವ ಹಲವಾರು ಛಾಯಾಚಿತ್ರಗಳು ಮತ್ತು ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಐಸಿಸ್ ಧ್ವಜವನ್ನು ಸಹ ಪತ್ತೆಹಚ್ಚಲು ಕಾರಣವಾಯಿತು ಎಂದು ಎನ್ಐಎ ತಿಳಿಸಿದೆ.
ರೈಲು ಸ್ಫೋಟ ಪ್ರಕರಣ:ಈ ಗುಂಪು ವಿವಿಧ ಸ್ಥಳಗಳಿಂದ ಅಕ್ರಮ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಇತ್ಯಾದಿಗಳನ್ನು ಸಂಗ್ರಹಿಸಿದೆ ಎಂದು ವರದಿಯಾಗಿದೆ. ಆರೋಪಿಗಳಲ್ಲಿ ಒಬ್ಬರಾದ ಅತೀಫ್ ಮುಜಾಫರ್ ಅವರು ವಿವಿಧ ಅಂತರ್ಜಾಲ ಮೂಲಗಳಿಂದ ವಸ್ತುಗಳನ್ನು ಸಂಗ್ರಹಿಸಿದ ನಂತರ ಐಇಡಿಗಳನ್ನು ತಯಾರಿಸುವ ತಂತ್ರಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ್ದರು. ಜೊತೆಗೆ ಭೋಪಾಲ್-ಉಜ್ಜಯಿನಿ ಪ್ಯಾಸೆಂಜರ್ ರೈಲಿನಲ್ಲಿ ಅಳವಡಿಸಲಾಗಿದ್ದ ಐಇಡಿಯನ್ನು ತಯಾರಿಸುವ ಜವಾಬ್ದಾರಿಯನ್ನು ಎಂಡಿ ಡ್ಯಾನಿಶ್, ಸೈಯದ್ ಮೀರ್ ಹಸನ್ ಮತ್ತು ಎಂಡಿ ಸೈಫುಲ್ಲಾ ಹೊಂದಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. 2017ರ ಮಾರ್ಚ್ 7ರಂದು ರೈಲು ಸ್ಫೋಟ ಪ್ರಕರಣದಲ್ಲಿ 10 ಮಂದಿ ಗಾಯಗೊಂಡಿದ್ದರು. ಈ ಪ್ರಕರಣವನ್ನು ಕೂಡಾ ಎನ್‌ಐಎ ತನಿಖೆ ನಡೆಸಿದ್ದು, ಪ್ರಸ್ತುತ ವಿಚಾರಣೆ ಹಂತದಲ್ಲಿದೆ.