ಮುಂಬೈ:ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ವಿರುದ್ಧದ ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ಮುಂಬೈನ ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಹೇಳಿಕೆ ದಾಖಲಿಸಿಕೊಳ್ಳಲು ಎನ್‌ಐಎ ಕೋರ್ಟ್ ಇಡಿಗೆ ಅನುಮತಿ ನೀಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಶೀಘ್ರದಲ್ಲೇ ನವಿ ಮುಂಬೈನ ತಲೋಜಾ ಜೈಲಿಗೆ ಭೇಟಿ ನೀಡಿ ವಾಜೆ ಅವರ ಹೇಳಿಕೆ ದಾಖಲಿಸಿಕೊಳ್ಳಲುವುದಾಗಿ ಹೇಳಿದ್ದಾರೆ.
ಸಚಿನ್ ವಾಜೆ ಅವರು ಅಪರಾಧ ತನಿಖಾ ದಳದ ಮುಖ್ಯಸ್ಥರಾಗಿದ್ದಾಗ 2020ರ ಡಿಸೆಂಬರ್‌ನಲ್ಲಿ ಬಾರ್ ಮಾಲೀಕರಿಂದ 40 ಲಕ್ಷ ರೂಪಾಯಿ ಪಡೆದಿದ್ದಾರೆ. ಮುಂಬೈ ಪೊಲೀಸ್ ವಲಯ 1 ರಿಂದ 7ಕ್ಕೆ 1.64 ಕೋಟಿ ಹಾಗೂ 8 ರಿಂದ 12 ವಲಯಗಳಿಗೆ 2.66 ಕೋಟಿ ರೂಪಾಯಿಗಳನ್ನು ಬಾರ್ ಮಾಲೀಕರು ಪಾವತಿಸಿದ್ದಾರೆ ಎಂದು ಇಡಿ ಅಧಿಕಾರಿಗಳು ಕೋರ್ಟ್‌ಗೆ ತಿಳಿಸಿದ್ದಾರೆ.
ಸೋ ಅಂಡ್ ಸೋಗೆ ಈ ಹಣ ಹೋಗುತ್ತೆ ಎಂದು ಸಚಿನ್ ವಾಜೆ ಬಾರ್ ಮಾಲೀಕರಿಗೆ ಹೇಳಿದ್ದರು. 2020 ಡಿಸೆಂಬರ್ ನಿಂದ 2021ರ ಫೆಬ್ರವರಿ ವರೆಗೆ 4.77 ಕೋಟಿ ರೂಪಾಯಿ ಸಂಗ್ರಹಿಸಿ ಕುದನ್ ಶಿಂಧೆ ಅವರಿಗೆ ನೀಡಿದ್ದಾರೆ. ಈ ಸಂಬಂಧ ಇಬ್ಬರು ಪೊಲೀಸ್ ಅಧಿಕಾರಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಇಡಿ ಪರ ವಕೀಲರು ಎನ್‌ಐಎ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ನಲ್ಲಿ ಭಾಗವಹಿಸುವ ಅಥ್ಲೀಟ್ಗಳ ಸಿದ್ಧತೆ ಬಗ್ಗೆ ಪ್ರಧಾನಿ ಮೋದಿ ಸಭೆ
ಉದ್ಯಮಿ ಮುಖೇಶ್ ಅಂಬಾನಿ ಅವರ ಮನೆಯ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಸ್ಫೋಟಕಗಳು ಪತ್ತೆ ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ಮಾರ್ಚ್‌ನಲ್ಲಿ ಸಚಿನ್ ವಾಜೆ ಅವರನ್ನು ಬಂಧಿಸಿದ್ದರು. ಫೆಬ್ರವರಿ 25 ರಂದು ಮುಂಬೈನಲ್ಲಿರುವ ಮುಖೇಶ್ ಅಂಬಾನಿ ಅವರ ಆಂಟಿಲಿಯಾ ಮನೆ ಬಳಿ ಸ್ಫೋಟಕ ತುಂಬಿದ ವಾಹನ ನಿಲ್ಲಿಸಿದ್ದ ಕೇಸ್‌ನಲ್ಲಿ ಸಚಿನ್ ವಾಜೆ ಪ್ರಮುಖ ಆರೋಪಿಯಾಗಿದ್ದಾರೆ.