ಕರ್ನಾಟಕ

karnataka

ETV Bharat / bharat

ಖಲಿಸ್ತಾನಿ ಉಗ್ರ ಪನ್ನುಗೆ ಸೇರಿದ ಕೃಷಿ ಭೂಮಿ, ಮನೆ ಮುಟ್ಟುಗೋಲು ಹಾಕಿದ ಎನ್‌ಐಎ - ಗುರುಪತ್​ವಂತ್​ ಸಿಂಗ್​ ಪನ್ನು

NIA confiscates properties of Pannu: ಪಂಜಾಬ್​ನ ಅಮೃತಸರ ಹಾಗೂ ಚಂಡೀಗಢದಲ್ಲಿ ಖಲಿಸ್ತಾನಿ ಉಗ್ರ ಗುರುಪತ್​ವಂತ್​ ಸಿಂಗ್​ ಪನ್ನುವಿಗೆ ಸೇರಿದ ಕೃಷಿ ಭೂಮಿ ಹಾಗೂ ಮನೆಯನ್ನು ಎನ್‌ಐಎ ಮುಟ್ಟುಗೋಲು ಹಾಕಿದೆ.

NIA confiscates properties of SFJ chief Pannu in Amritsar, Chandigarh
ಖಲಿಸ್ತಾನಿ ಉಗ್ರ ಪನ್ನುವಿಗೆ ಸೇರಿದ ಕೃಷಿ ಭೂಮಿ, ಮನೆ ಮುಟ್ಟುಗೋಲು ಹಾಕಿದ ಎನ್‌ಐಎ

By ETV Bharat Karnataka Team

Published : Sep 23, 2023, 5:58 PM IST

Updated : Sep 23, 2023, 10:56 PM IST

ಚಂಡೀಗಢ (ಪಂಜಾಬ್​):ಖಲಿಸ್ತಾನ ಪರ ನಾಯಕ, ನಿಷೇಧಿತ ಸಿಖ್​ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಸಂಘಟನೆಯ ಮುಖ್ಯಸ್ಥ ಗುರುಪತ್​ವಂತ್​ ಸಿಂಗ್​ ಪನ್ನುವಿಗೆ ಸೇರಿದ ಸ್ಥಿರಾಸ್ತಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುಟ್ಟುಗೋಲು ಹಾಕಿದೆ. ಶನಿವಾರ ಚಂಡೀಗಢ ಮತ್ತು ಅಮೃತಸರದಲ್ಲಿ ಸ್ಥಿರಾಸ್ತಿಗಳ ಜಪ್ತಿ ನೋಟಿಸ್​ಅನ್ನು ಎನ್‌ಐಎ ಅಂಟಿಸಿದೆ.

ಪಂಜಾಬ್​ನ ಅಮೃತಸರ ಜಿಲ್ಲೆಯಲ್ಲಿರುವ ಖಲಿಸ್ತಾನಿ ಉಗ್ರ ಪನ್ನು ಪೂರ್ವಜರ ಗ್ರಾಮ ಖಾನ್‌ಕೋಟ್‌ನಲ್ಲಿ 46 ಕನಾಲ್ ಕೃಷಿ ಭೂಮಿ (ಅಂದಾಜು 5.76 ಎಕರೆ) ಹಾಗೂ ಚಂಡೀಗಢದ ಸೆಕ್ಟರ್​ 15 ಪ್ರದೇಶದಲ್ಲಿರುವ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

''ಎನ್‌ಐಎ ಪ್ರಕರಣದಲ್ಲಿ ಘೋಷಿತ ಅಪರಾಧಿ ಗುರುಪತ್​ವಂತ್​ ಸಿಂಗ್​ ಪನ್ನು ಒಡೆತನದ ಮನೆ ನಂ.2033ರ 1/4ನೇ ಪಾಲನ್ನು ಸೆಕ್ಷನ್ 33(5) ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ 1967ರ ಎನ್ಐಎ ವಿಶೇಷ ನ್ಯಾಯಾಲಯದ ಆದೇಶಗಳ ಆದೇಶದ ಪ್ರಕಾರ ಜಪ್ತಿ ಮಾಡಲಾಗಿದೆ. ಇದು ಸಾರ್ವಜನಿಕರ ಮಾಹಿತಿಗಾಗಿ" ಎಂದು ಚಂಡೀಗಢದ ಮನೆ ಬಳಿ ನೋಟಿಸ್​ ಹಾಕಲಾಗಿದೆ.

ಈಗಾಗಲೇ ಯುಎಪಿಎ ಅಡಿಯಲ್ಲಿ ಕೇಂದ್ರ ಗೃಹ ಸಚಿವಾಲಯವು ಪನ್ನುವನ್ನು ಭಯೋತ್ಪಾದಕ ಎಂದು ಘೋಷಿಸಿದೆ. ಜೂನ್‌ನಲ್ಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಖಲಿಸ್ತಾನಿ ಉಗ್ರ ಹರ್​ದೀಪ್ ಸಿಂಗ್ ನಿಜ್ಜಾರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿದೆ. ಇದು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಧ್ಯೆಯೇ ಎನ್‌ಐಎ ಖಲಿಸ್ತಾನಿ ಉಗ್ರ ಪನ್ನು ವಿರುದ್ಧ ಈ ಕ್ರಮ ಜರುಗಿಸಲಾಗಿದೆ. ಈ ಹಿಂದೆ ಪನ್ನು ಕೆನಡಾದ ಹಿಂದೂಗಳ ಮೇಲೆ ಹಲ್ಲೆ ನಡೆಸಿ, ಅವರಿಗೆ ದೇಶವನ್ನು ತೊರೆದು ಭಾರತಕ್ಕೆ ಹಿಂತಿರುಗುವಂತೆ ಬೆದರಿಕೆ ಹಾಕಿದ್ದ.

ಭಯೋತ್ಪಾದಕ ಚಟುವಟಿಕೆಗಳ ಆರೋಪದ ಮೇಲೆ ಯುಎಪಿಎ ಕಾಯ್ಡೆಯಡಿ ಪನ್ನು ನೇತೃತ್ವದ ಸಿಖ್​ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ)​ ಸಂಘಟನೆಯನ್ನು 2019ರಲ್ಲಿ ಕೇಂದ್ರ ಸರ್ಕಾರ ನಿಷೇಧಿಸಿತ್ತು. ಸಿಖ್ಖರ ಜನಾಭಿಪ್ರಾಯ ಸಂಗ್ರಹಣೆಯ ನೆಪದಲ್ಲಿ ಪಂಜಾಬ್‌ನಲ್ಲಿ ಎಸ್‌ಎಫ್‌ಜೆ ಪ್ರತ್ಯೇಕತಾವಾದ ಮತ್ತು ಉಗ್ರಗಾಮಿ ಸಿದ್ಧಾಂತವನ್ನು ತುಂಬುತ್ತಿದೆ ಎಂದು ಗೃಹ ಸಚಿವಾಲಯ ತಿಳಿಸಿತ್ತು.

ಅಲ್ಲದೇ, 2020ರಲ್ಲಿ ಪನ್ನು ಕೂಡ ಪ್ರತ್ಯೇಕತಾವಾದ ಹಾಗೂ ಪಂಜಾಬ್‌ನ ಸಿಖ್ ಯುವಕರನ್ನು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಲು ಪ್ರಚೋದನೆ ನೀಡುತ್ತಿದ್ದಾನೆ ಎಂದು ಹೇಳಿತ್ತು. ಇದರ ನಂತರ, ಅದೇ ವರ್ಷದ ಜುಲೈ 1ರಂದು ಪನ್ನುವನ್ನು ಭಯೋತ್ಪಾದಕ ಎಂದು ಘೋಷಿಸಿದ್ದ ಸರ್ಕಾರವು ಎಸ್‌ಎಫ್‌ಜೆಗೆ ಸಂಬಂಧಿಸಿದ 40ಕ್ಕೂ ಹೆಚ್ಚು ವೆಬ್‌ಸೈಟ್​ಗಳು ಮತ್ತು ಯೂಟ್ಯೂಬ್ ಚಾನಲ್‌ಗಳನ್ನೂ ನಿಷೇಧಿಸಿತ್ತು.

ಇದನ್ನೂ ಓದಿ:'ಭಾರತದ ವಿರುದ್ಧ ಖಲಿಸ್ತಾನಿಗಳನ್ನು ಪ್ರಚೋದಿಸುತ್ತಿಲ್ಲ': ರಾಜತಾಂತ್ರಿಕ ಅಧಿಕಾರಿ ಉಚ್ಚಾಟನೆಗೆ ಬೆದರಿದ ಕೆನಡಾ ಪ್ರಧಾನಿ ಟ್ರುಡೊ

Last Updated : Sep 23, 2023, 10:56 PM IST

ABOUT THE AUTHOR

...view details