ಬೆಂಗಳೂರು: ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನಕ್ಕೆ (ಟಿಟಿಪಿ) ನಿಧಿ ಸಂಗ್ರಹ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಕರ್ನಾಟಕದ ನ್ಯಾಯಾಲಯದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಚಾರ್ಜ್ಶೀಟ್ ಸಲ್ಲಿಸಿತು. ಈ ಆರೋಪಿಗಳು ಹಿಂಸಾತ್ಮಕ ಜಿಹಾದ್ ಕೃತ್ಯಗಳ ನಡೆಸಲು ಭಾರತದ ಮುಸ್ಲಿಂ ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡಲು ಮತ್ತು ನಿಷೇಧಿತ ಉಗ್ರ ಸಂಘಟನೆಗೆ ನೇಮಿಸಲು ಪ್ರಯತ್ನಿಸಿದ್ದರು ಎಂದು ತನಿಖಾ ಸಂಸ್ಥೆ ಹೇಳಿದೆ.
ಬೆಂಗಳೂರಿನಲ್ಲಿ ಫ್ರೆಂಚ್ ಭಾಷಾಂತರನಾಗಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಅಲಿಗಢ್ ಜಿಲ್ಲೆಯ ನಿವಾಸಿ ಮೊಹಮ್ಮದ್ ಆರೀಫ್ (42) ಹಾಗೂ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ನಿವಾಸಿ ಹರ್ಮಝ್ ವರ್ಸಿದ್ ಶೇಖ್ ವಿರುದ್ಧ ಎನ್ಐಎ ಕೇಸ್ ದಾಖಲಿಸಿತ್ತು. ಇಬ್ಬರು ಆರೋಪಿಗಳ ವಿರುದ್ಧವೂ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಹಾಗೂ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ಗಳಡಿ ಆರೋಪಗಳನ್ನು ಹೊರಿಸಲಾಗಿದೆ.
ಆರೀಫ್ ಹಾಗೂ ಶೇಖ್ ಸಾಮಾಜಿಕ ಜಾಲತಾಣಗಳಲ್ಲಿ ಗೂಢಲಿಪಿ ಮೂಲಕ ಸಂವಹನ ನಡೆಸುತ್ತಿದ್ದರು. ಸಿರಿಯಾ ಮೂಲದ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನದ ಆನ್ಲೈನ್ ನಿರ್ವಾಹಕನೊಂದಿಗೆ (ಹ್ಯಾಂಡ್ಲರ್) ಸೇರಿಕೊಂಡು ಸಂಚು ರೂಪಿಸುತ್ತಿದ್ದರು. ಭಾರತದಲ್ಲಿ ತಮ್ಮ ಬಲೆಗೆ ಸುಲಭವಾಗಿ ಬೀಳುವ ಮುಸ್ಲಿಂ ಯುವಕರನ್ನು ಈ ಇಬ್ಬರೂ ಆರೋಪಿಗಳು ಗುರುತಿಸುತ್ತಿದ್ದರು. ಅಲ್ಲದೇ, ಆ ಯುವಕರನ್ನೂ ಮೂಲಭೂತವಾದಿಗಳನ್ನಾಗಿ ಮಾಡಲು ಹಾಗೂ ಟಿಟಿಪಿ ಸಿದ್ಧಾಂತದ ಬಗ್ಗೆ ಪ್ರಚಾರ ಮಾಡುವ ಮೂಲಕ ನೇಮಿಸಿಕೊಳ್ಳಲು ಯತ್ನಿಸುತ್ತಿದ್ದರು. ಅಷ್ಟೇ ಅಲ್ಲ, ಜಿಹಾದ್ನಲ್ಲಿ ತೊಡಗಲು ಹಾಗೂ ಜಿಹಾದ್ ಕೃತ್ಯಗಳನ್ನು ನಡೆಸಲು ಟಿಟಿಪಿ ಸಂಘಟನೆಗೆ ಸೇರುವಂತೆ ಅಮಾಯಕ ಯುವಕರಿಗೆ ಪ್ರಚೋದಿಸುತ್ತಿದ್ದರು ಎಂಬುದು ಎನ್ಐಎ ತನಿಖೆಯಲ್ಲಿ ಬಯಲಾಗಿದೆ.