ನವದೆಹಲಿ: ದೇಶ ಮತ್ತು ವಿದೇಶಗಳಲ್ಲಿ ಕ್ರಿಮಿನಲ್ ಸಿಂಡಿಕೇಟ್ ನಡೆಸುತ್ತಿರುವ ಮತ್ತು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದ ಮೂವರು ಗ್ಯಾಂಗ್ಸ್ಟರ್ಗಳನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿದೆ.
ಬಂಧಿತ ಗ್ಯಾಂಗ್ಸ್ಟರ್ಗಳನ್ನು ದೆಹಲಿಯ ಬವಾನಾ ಗ್ರಾಮದ ನೀರಜ್ ಸೆಹ್ರಾವತ್, ಹರಿಯಾಣದ ಗುರುಗ್ರಾಮ್‌ನ ಕೌಶಲ್ ಅಲಿಯಾಸ್ ನರೇಶ್ ಚೌಧರಿ ಮತ್ತು ಪಂಜಾಬ್‌ನ ಸಾಹಿಬ್ಜಾದಾ ಅಜಿತ್ ಸಿಂಗ್ ನಗರದ ಭೂಪಿಂದರ್ ಸಿಂಗ್ ಅಲಿಯಾಸ್ ಭೂಪಿ ರಾಣಾ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಪಿಎಫ್ಐ ಪ್ರತಿಭಟನೆಯಲ್ಲಿ ಕೇಳಿ ಬಂದ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ
ಈ ಗ್ಯಾಂಗ್ಸ್ಟರ್ಗಳು ಹತ್ಯೆ ಪ್ರಕರಣ ಸೇರಿದಂತೆ ವಿವಿಧ ರೀತಿಯ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಅಲ್ಲದೇ, ತಮ್ಮ ಕ್ರಿಮಿನಲ್ ಸಿಂಡಿಕೇಟ್‌ಗಳು ಮತ್ತು ಚಟುವಟಿಕೆಗಳನ್ನು ನಡೆಸಲು ಜನರಿಗೆ ಬೆದರಿಸಿ ಹಣ ಸುಲಿಗೆ ಪ್ರಕರಣಗಳಲ್ಲಿ ಮೂವರು ಪಾಲ್ಗೊಂಡಿದ್ದರು. ಇಷ್ಟೇ ಅಲ್ಲ, ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮೂಲಕ ಅಪರಾಧ ಚಟುವಟಿಕೆಗಳನ್ನು ನಡೆಸಲು ಹಣವನ್ನು ಗ್ಯಾಂಗ್ಸ್ಟರ್ಗಳು ಸಂಗ್ರಹಿಸುತ್ತಿದ್ದರು ಎಂದು ಎನ್‌ಐಎ ವಕ್ತಾರರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಭಾರತ ಮತ್ತು ವಿದೇಶಗಳಲ್ಲಿ ನೆಲೆಸಿರುವ ಕ್ರಿಮಿನಲ್ ಸಿಂಡಿಕೇಟ್, ಗ್ಯಾಂಗ್‌ಗಳ ಸದಸ್ಯರು ದೆಹಲಿ ಮತ್ತು ರಾಷ್ಟ್ರದ ಇತರ ಭಾಗಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿರುವ ಸಂಬಂಧ ಇದೇ ಆಗಸ್ಟ್ 7ರಂದು ಎಂಟು ಆರೋಪಿಗಳು ಮತ್ತು ಇತರ ಅಪರಿಚಿತರು ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಸದ್ಯ ಈ ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎನ್‌ಐಎ ವಕ್ತಾರರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಬಂಧಿತ ಪಿಎಫ್ಐ ಪ್ರಮುಖರ ಮನೆಯಲ್ಲಿ ಸಾವರ್ಕರ್ ಪುಸ್ತಕ: ಆರೋಪಿಗಳಿಗಿದೆ ಕೆಲ ರಾಜಕಾರಣಿಗಳ ನಂಟು