ನವದೆಹಲಿ :ಕರ್ನಾಟಕದಲ್ಲಿ ಹಲವು ಭಯೋತ್ಪಾದಕ ಕೃತ್ಯಗಳ ಕಿಂಗ್ಪಿನ್, ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರ ಸಂಘಟನೆಗೆ ಸೇರಿದ್ದ ಅರಾಫತ್ ಅಲಿ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಪೊಲೀಸರು ದೆಹಲಿಯಲ್ಲಿ ಇಂದು ಬಂಧಿಸಿದ್ದಾರೆ. ಕೀನ್ಯಾದ ನೈರೋಬಿಯಿಂದ ನವದೆಹಲಿಗೆ ವಿಮಾನದಲ್ಲಿ ಆಗಮಿಸಿದಾಗ ನಿಲ್ದಾಣದಲ್ಲೇ ಭಯೋತ್ಪಾದಕ ಸಂಚುಕೋರನನ್ನು ಸೆರೆ ಹಿಡಿಯಲಾಗಿದೆ.
ಉಗ್ರ ಅರಾಫತ್ ಅಲಿ ನೇರವಾಗಿ ಯಾವುದೇ ದಾಳಿಗಳಲ್ಲಿ ಭಾಗಿಯಾಗಿಲ್ಲವಾದರೂ, ಆತ ವಿದೇಶದಲ್ಲೇ ಕುಳಿತುಕೊಂಡು ದೇಶದಲ್ಲಿ ನಡೆಯುವ ಭಯೋತ್ಪಾದಕ ಸಂಚುಗಳಿಗೆ ಹಣಕಾಸಿನ ನೆರವು ಒದಗಿಸುತ್ತಿದ್ದ. ವಿದೇಶದಲ್ಲಿ ಭಾರತದ ವಿರುದ್ಧ ಪಿತೂರಿ ನಡೆಸುತ್ತಿದ್ದ ಎಂಬುದನ್ನು ಎನ್ಐಎ ಪತ್ತೆ ಮಾಡಿತ್ತು. ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಉಗ್ರನನ್ನು ಈಗ ಬಂಧಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದವನಾದ ಭಯೋತ್ಪಾದಕ ಚಟುವಟಿಕೆ ಕಿಂಗ್ ಪಿನ್ ಅರಾಫತ್ ಅಲಿ 2020 ರಿಂದ ಭಾರತದಿಂದ ತಪ್ಪಿಸಿಕೊಂಡು ಮೋಸ್ಟ್ ವಾಂಟೆಡ್ ಉಗ್ರ ಅಬ್ದುಲ್ ಮತೀನ್ ಜೊತೆಗೆ ನಾಪತ್ತೆಯಾಗಿದ್ದ. ಇದಾದ ಬಳಿಕ ಐಸಿಸ್ ಪ್ರಚಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ. ಭಯೋತ್ಪಾದಕ ಕೃತ್ಯಗಳಿಗೆ ಈತ ವಿದೇಶದಲ್ಲೆ ಸಂಚು ರೂಪಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿಗಳಾದ ಮೊಹಮದ್ ಶಾರಿಕ್ ಹಾಗೂ ಮಾಜ್ ಮುನೀರ್ಗೆ ವಿದೇಶದಿಂದ ಹಣಕಾಸಿನ ನೆರವನ್ನು ಇದೇ ಅರಾಫತ್ ಅಲಿ ನೀಡಿದ್ದ. ಬಳಿಕ ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ನಲ್ಲಿ ಶಾರಿಕ್ ಸಿಕ್ಕಿ ಬಿದ್ದಿದ್ದ. ಕದ್ರಿ ಗೋಡೆ ಬರಹ ಪ್ರಕರಣದಲ್ಲೂ ಈತನ ಕೈವಾಡವಿದೆ ಎಂದು ತನಿಖೆಯಲ್ಲಿ ಪತ್ತೆಯಾಗಿತ್ತು.
ಐಸಿಸ್ಗೆ ಯುವಕರ ಸೇರ್ಪಡೆ:ಉಗ್ರ ಸಂಚುಕೋರ ಅರಾಫತ್ ಅಲಿ, ಯುವಕರನ್ನು ಗುರುತಿಸಿ ಉಗ್ರ ಸಂಘಟನೆ ಐಸಿಸ್ಗೆ ಸೇರಿಸುವ ಕೆಲಸ ಮಾಡುತ್ತಿದ್ದ. ಶಿವಮೊಗ್ಗದಲ್ಲಿ ಭಯೋತ್ಪಾದನೆ ಸಂಚು, ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಗಳ ಆರೋಪಿಗಳೊಂದಿಗೆ ಅಲಿ ಸಂಪರ್ಕದಲ್ಲಿದ್ದ. ಸಂಚಿನ ಯೋಜನೆ ಮತ್ತು ಕಾರ್ಯಗತಗೊಳಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ಪ್ರಕರಣದಲ್ಲಿ ಬಂಧಿತನಾದ ಅಲಿ ಮತ್ತು ಇತರ ಶಂಕಿತರ ವಿರುದ್ಧ ತನಿಖೆ ನಡೆಸಲಾಗುತ್ತದೆ ಎಂದು ಎನ್ಐಎ ತಿಳಿಸಿದೆ.
ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ರೂವಾರಿ ಉಗ್ರ ಶಾರೀಕ್ನನ್ನು ಶಿವಮೊಗ್ಗ ಪೊಲೀಸರು ಕರೆ ತಂದು ವಿಚಾರಣೆ ನಡೆಸಿದ್ದರು. ಶಾರೀಕ್ ಯುಎಪಿಎ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಈತ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಬಳಿಕ ಪೊಲೀಸರು ವಶಕ್ಕೆ ಪಡೆದು ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಇರಿಸಿದ್ದರು.
ಇದನ್ನೂ ಓದಿ:ಕುಕ್ಕರ್ ಸ್ಫೋಟ ಕೇಸ್.. ರಿಕ್ಷಾ ಚಾಲಕನಿಗೆ ಗುರು ಬೆಳದಿಂಗಳು ಸಂಸ್ಥೆಯಿಂದ ಮನೆ ಹಸ್ತಾಂತರ.. ಇನ್ನೂ ಸಿಗದ ಸರ್ಕಾರದ ಪರಿಹಾರ