ನವದೆಹಲಿ: ನಿಧಿ ಸಂಗ್ರಹಣೆ ಹಾಗೂ ಅಲ್ಪಸಂಖ್ಯಾತ ಯುವಕರನ್ನು ಸಂಘಟನೆಗೆ ಸೇರಿಸಲು ಸಿರಿಯಾಕ್ಕೆ ಕಳುಹಿಸಿದ ಆರೋಪದ ಮೇಲೆ ಎನ್ಐಎ ಅಧಿಕಾರಿಗಳು ಶಂಕಿತ ಐಸಿಸ್ ಉಗ್ರನನ್ನು ಬಂಧಿಸಿದ್ದಾರೆ.
ಮುಹಮ್ಮದ್ ತೌಕೀರ್ ಮಹಮೂದ್ (33) ಬಂಧಿತ ಭಯೋತ್ಪಾದಕ. ಈತ ಬೆಂಗಳೂರು ನಿವಾಸಿಯಾಗಿದ್ದು, ಶನಿವಾರ ಬಂಧಿಸಲಾಗಿದೆ ಎಂದು ಎನ್ಐಎ ತಿಳಿಸಿದೆ.
2013ರಲ್ಲಿ ಮಹಮೂದ್ ತನ್ನ ಸಹಚರನೊಂದಿಗೆ ಕಾನೂನುಬಾಹಿರವಾಗಿ ಸಿರಿಯಾಕ್ಕೆ ಭೇಟಿ ನೀಡಿದ್ದನು ಎಂಬ ಅಂಶ ತನಿಖೆಯಿಂದ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಾದ ಅಹ್ಮದ್ ಅಬ್ದುಲ್ ಕ್ಯಾಡರ್ ಮತ್ತು ಇರ್ಫಾನ್ ನಾಸಿರ್ ಎಂಬ ಇಬ್ಬರು ಆರೋಪಿಗಳನ್ನು ತನಿಖಾ ಸಂಸ್ಥೆ ಬಂಧಿಸಿತ್ತು.
ಇವರು ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಐಎಸ್ಐಎಸ್/ಐಎಸ್ಐಎಲ್/ಡೇಶ್ ನೊಂದಿಗೆ ಸಂಬಂಧ ಹೊಂದಿದ್ದು, ಆರೋಪಿಗಳ ಮೇಲೆ ಐಪಿಸಿ ಮತ್ತು ಯುಎ(ಪಿ)ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ನಾಳೆಯಿಂದ 4 ದಿನಗಳ ಕಾಲ ಸೇನಾ ಕಮಾಂಡರ್ಗಳ ಸಮಾವೇಶ: ಯಾವೆಲ್ಲಾ ವಿಚಾರಗಳ ಬಗ್ಗೆ ಚರ್ಚೆ?