ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯ ನಿವಾಸಿ, ಉಗ್ರ ಬಸಿತ್ ಅಹ್ಮದ್ ದಾರ್ ಎಂಬಾತನ ಬಂಧನಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ಬಸಿತ್ ದಾರ್ ಉಗ್ರ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (The Resistance Front - TRF)ನೊಂದಿಗೆ ನಂಟು ಹೊಂದಿದ್ದಾನೆ. ಈತನ ಬಂಧನಕ್ಕಾಗಿ ತನಿಖಾ ಸಂಸ್ಥೆ ಶೋಧ ಕಾರ್ಯ ನಡೆಸುತ್ತಿದೆ.
ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ವರ್ಷ ನಡೆದ ನಾಗರಿಕರ ಹತ್ಯೆ ಪ್ರಕರಣಗಳಲ್ಲಿ ಬಸಿತ್ ದಾರ್ ಬೇಕಾಗಿದ್ದಾನೆ. ಈತನ ವಿರುದ್ಧ ದಾಖಲಾಗಿರುವ ಪ್ರಕರಣ (ಆರ್‌ಸಿ-32/2021/ಎನ್‌ಐಎ/ಡಿಎಲ್‌ಐ)ದಲ್ಲಿ ಎನ್‌ಐಎ ಹುಡುಕಾಟ ನಡೆಸುತ್ತಿದೆ. ಅಹ್ಮದ್ ದಾರ್ ಬಗ್ಗೆ ಮಾಹಿತಿ ನೀಡುವ ಯಾರಿಗಾದರೂ 10 ಲಕ್ಷ ರೂ. ಬಹುಮಾನ ನೀಡಲಾಗುವುದು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಎನ್‌ಐಎ ಪ್ರಕಟಣೆ ಹೊರಡಿಸಿದೆ.
2019ರಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಕಣಿವೆ ನಾಡಿನಲ್ಲಿ ಕೆಲವು ಹೊಸ ಉಗ್ರಗಾಮಿ ಸಂಘಟನೆಗಳು ಹುಟ್ಟಿಕೊಂಡಿವೆ. ಅವುಗಳಲ್ಲಿ ಟಿಆರ್ಎಫ್ ಸಹ ಒಂದಾಗಿದೆ. ಉಗ್ರಗಾಮಿ ಸಂಘಟನೆಗೆ ಸೇರಿದ ನಂತರ ಬಸಿತ್ ದಾರ್ ಟಿಆರ್ಎಫ್ನ ಕಮಾಂಡರ್ ಅಬ್ಬಾಸ್ ಶೇಖ್ ಆದೇಶಗಳು ಮತ್ತು ನಿರ್ದೇಶನಗಳನ್ನು ಅನುಸರಿಸುತ್ತಿದ್ದ. ಶೇಖ್ ಸಾವಿನ ನಂತರ ದಾರ್ ಸ್ವತಃ ಕಮಾಂಡರ್ ಆಗಿದ್ದ. ಈ ಟಿಆರ್ಎಫ್ ಮತ್ತು ಲಷ್ಕರ್-ಎ-ತೊಯ್ಬಾ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಲಷ್ಕರ್ ಸಂಘಟನೆಯೇ ಈಗ ಹೊಸ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳಿದ್ದಾರೆ.
ಇಬ್ಬರು ಶಂಕಿತರ ಬಂಧನ:ಮತ್ತೊಂದೆಡೆ, ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಇಂದು ಇಬ್ಬರು ಶಂಕಿತರನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಭಯೋತ್ಪಾದನೆ ಸಂಚಿನ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು, ಕಾಶ್ಮೀರಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಶಾಮೀಲಾಗಿರುವ ಮುಶೈಬ್ ಫಯಾಜ್ ಬಾಬಾ ಅಲಿಯಾಸ್ ಶೋಯೆಬ್ (20) ಮತ್ತು ಹಿಲಾಲ್ ಯಾಕೂಬ್ ದೇವಾ ಅಲಿಯಾಸ್ ಸೇಥಿ ಸೋಬ್ (35) ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.
ಈ ಬಂಧಿತ ಆರೋಪಿಗಳು ಪಾಕ್ ಮೂಲದ ಕಮಾಂಡರ್‌ಗಳು ಮತ್ತು ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಮತ್ತು ಟಿಆರ್ಎಫ್ ಸಂಘಟನೆಗಳೊಂದಿಗೆ ನಂಟು ಹೊಂದಿದ್ದಾರೆ. ನಿಷೇಧಿತ ಉಗ್ರ ಸಂಘಟನೆಗಳು ಮತ್ತು ಅವುಗಳ ರೂಪಾಂತರವಾಗಿ ತಲೆ ಎತ್ತುತ್ತಿರುವ ಸಂಘಟನೆಗಳ ಮತ್ತು ಅಂಗಸಂಸ್ಥೆಗಳ ಓವರ್ ಗ್ರೌಂಡ್ ವರ್ಕರ್ಸ್ ವಸತಿ ಪ್ರದೇಶದ ಮೇಲೆ ಎನ್‌ಐಎ ಅಧಿಕಾರಿಗಳು ನಿರಂತರವಾಗಿ ದಾಳಿ ಮಾಡುತ್ತಿದ್ದು, ಈ ವೇಳೆ, ಇಬ್ಬರನ್ನು ಸೆರೆ ಹಿಡಿಯಲಾಗಿದೆ. ಸಮಯದಲ್ಲಿ ಹಲವಾರು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶುಕ್ರವಾರ ಬಂಧಿಸಲಾದ ಇಬ್ಬರು ಆರೋಪಿಗಳು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳ ಮೂಲಕ ಪಾಕಿಸ್ತಾನ ಮೂಲದ ಕಮಾಂಡರ್‌ಗಳು ಮತ್ತು ವಿವಿಧ ಭಯೋತ್ಪಾದಕ ಸಂಘಟನೆಗಳ ಸಕ್ರಿಯ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಇವರು ಭಯೋತ್ಪಾದಕರ ಒಜಿಡಬ್ಲ್ಯೂಗಳಾಗಿ ಕೆಲಸ ಮಾಡುತ್ತಿದ್ದರು. ದೊಡ್ಡ ಪಿತೂರಿಯ ಭಾಗವಾಗಿ ಪಾಕ್ ಮೂಲದ ಕಮಾಂಡರ್‌ಗಳು, ಹ್ಯಾಂಡ್ಲರ್‌ಗಳ ನಿರ್ದೇಶನದ ಮೇರೆಗೆ ಶಸ್ತ್ರಾಸ್ತ್ರಗಳು ಮತ್ತು ಹಣವನ್ನು ಒಂದು ಸ್ಥಳದಿಂದ ಇನ್ನೊಂದಕ್ಕೆ ಸಾಗಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎನ್‌ಐಎ ತಿಳಿಸಿದೆ.
ಇದನ್ನೂ ಓದಿ:ಗ್ಯಾಂಗಸ್ಟರ್ ಅಶ್ರಫ್ ಅಹ್ಮದ್ ಹಂತಕರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಎಸ್‌ಐಟಿ