ನವದೆಹಲಿ:ಬೆಳಗಾವಿ ಜಿಲ್ಲೆಯ ಗ್ರಾಮಯೊಂದರಲ್ಲಿ 42 ವರ್ಷದ ಮಹಿಳೆಯನ್ನು ವಿವಸ್ತ್ರಗೊಳಿಸಿ, ಮೆರವಣಿಗೆ ನಡೆಸಿದ್ದಲ್ಲದೆ ಬಳಿಕ ಆಕೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ಕರ್ನಾಟಕ ಸರ್ಕಾರ ಮತ್ತು ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ರೀತಿಯ ಘಟನೆಯಿಂದ ಮಹಿಳೆಯ ಬದುಕುವ ಹಕ್ಕು ಮತ್ತು ಘನತೆಯನ್ನು ಉಲ್ಲಂಘನೆ ಮಾಡಲಾಗಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಹೇಳಿಕೆಯಲ್ಲಿ ಪ್ರಸ್ತಾಪಿಸಿದೆ.
ಕರ್ನಾಟಕ ಪೊಲೀಸ್ ಪ್ರಕಾರ, ಮಹಿಳೆಯ ಪುತ್ರ ಹುಡುಗಿಯೊಂದಿಗೆ ಮದುವೆ ಮಾಡಿಕೊಳ್ಳಲು ಓಡಿಹೋಗಿದ್ದ. ನಂತರ ಡಿಸೆಂಬರ್ 11 ರಂದು ಈ ಘಟನೆ ನಡೆದಿತ್ತು. ಗ್ರಾಮದಲ್ಲಿ ಯುವಕನ ತಾಯಿಯನ್ನು ಯುವತಿ ಕುಟುಂಬಸ್ಥರು ವಿವಸ್ತ್ರಗೊಳಿಸಿ, ಮೆರವಣಿಗೆ ಮಾಡಿದ್ದರು. ಬಳಿಕ ಮಹಿಳೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಲಾಗಿದೆ ಎಂದು ಡಿಸೆಂಬರ್ 12ರಂದು ಪ್ರಕಟವಾದ ಮಾಧ್ಯಮ ವರದಿಯನ್ನು ಆಧರಿಸಿ ಎನ್‌ಎಚ್‌ಆರ್‌ಸಿ ಸ್ವಯಂ ಪ್ರೇರಿತವಾಗಿ ಕ್ರಮಕ್ಕೆ ಮುಂದಾಗಿದೆ.
ನಾಲ್ಕು ವಾರಗಳಲ್ಲಿ ಸಮಗ್ರವಾದ ವರದಿ ನೀಡಲು ಸೂಚನೆ: ''ಸಂತ್ರಸ್ತ ಮಹಿಳೆಯ ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ಸಮಸ್ಯೆ ಆಗಿದೆ. ಸಮಾಜದ ದುರ್ಬಲ ವರ್ಗಗಳನ್ನು, ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ರಕ್ಷಿಸುವುದು ರಾಜ್ಯದ ಕರ್ತವ್ಯವಾಗಿದೆ ಎಂದು ಮಾನವ ಹಕ್ಕುಗಳ ಆಯೋಗ ಹೇಳಿದೆ. ಜೊತೆಗೆ ಆಯೋಗವು ಕರ್ನಾಟಕದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದ್ದು, ನಾಲ್ಕು ವಾರಗಳಲ್ಲಿ ಸಮಗ್ರವಾದ ವರದಿ ನೀಡುವಂತೆ ಸೂಚನೆ ನೀಡಲಾಗಿದೆ'' ಎಂದು ಆಯೋಗದ ಅಧಿಕಾರಿಗಳು ಹೇಳಿದ್ದಾರೆ.
ತ್ವರಿತವಾಗಿ ತನಿಖಾ ತಂಡ ರಚಿಸಲು ತಿಳಿಸಿದ ಎನ್‌ಎಚ್‌ಆರ್‌ಸಿ:"ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ನ ದಾಖಲಾತಿಯ ಸ್ಥಿತಿ, ತನಿಖೆಯ ಪ್ರಗತಿ, ಆರೋಪಿಗಳ ಬಂಧನ ಹಾಗೂ ಸಂತ್ರಸ್ತ ಮಹಿಳೆಗೆ ಪರಿಹಾರ ಯೋಜನೆಯಡಿ ಪರಿಹಾರ ನೀಡುವ ಬಗ್ಗೆ ಮತ್ತು ರಾಜ್ಯದಲ್ಲಿ ಅಂತಹ ಘಟನೆಗಳನ್ನು ತಡೆಗಟ್ಟಲು ತೆಗೆದುಕೊಂಡ ಅಥವಾ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಕುರಿತು ವರದಿಯಲ್ಲಿ ಉಲ್ಲೇಖಿಸಬೇಕು. ಜೊತೆಗೆ ಡಿಐಜಿ, ತನಿಖಾ ತಂಡವನ್ನು ತ್ವರಿತವಾಗಿ ರಚಿಸಬೇಕು, ಪ್ರಕರಣದ ಸತ್ಯಾಸತ್ಯೆಯನ್ನು ಅರಿತುಕೊಳ್ಳಲು ಈ ತಂಡವು ಬೇಗ ವಿಚಾರಣೆ ನಡೆಸಬೇಕು, ಈ ಕೇಸ್ನ ಕುರಿತು ಸಮಗ್ರವಾದ ವರದಿ ಸಲ್ಲಿಸಲು ಆಯೋಗವು ತಿಳಿಸಿದೆ'' ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಬೆಳಗಾವಿ ಪ್ರಕರಣ ಖಂಡಿಸಿ 5 ಸದಸ್ಯರ ಸತ್ಯಶೋಧನಾ ಸಮಿತಿ ರಚಿಸಿದ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ