ಜೈಪುರ(ರಾಜಸ್ಥಾನ): ಇತ್ತೀಚಿಗೆ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ಸ್ಟಾಂಪ್ ಪೇಪರ್‌ಗಳಲ್ಲಿ ಸಹಿ ಹಾಕಿಸಿಕೊಂಡು ಹುಡುಗಿಯರನ್ನು ಮಾರಾಟ ಮಾಡಲಾಗಿದೆ ಎಂಬ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಇದೀಗ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(NHRC) ಈ ವಿಷಯವನ್ನು ತನಿಖೆ ಮಾಡಲು ಭಿಲ್ವಾರದ ಜಹಜ್‌ಪುರಕ್ಕೆ ತಲುಪಿದೆ.
ಗೆಹ್ಲೋಟ್ ಸರ್ಕಾರಕ್ಕೆ ನೋಟಿಸ್: ಸ್ಟಾಂಪ್ ಪೇಪರ್‌ಗಳಲ್ಲಿ ಸಹಿ ಹಾಕಿಸಿಕೊಂಡು ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಆಯೋಗವೂ ಗೆಹ್ಲೋಟ್ ಸರ್ಕಾರಕ್ಕೆ ನೋಟಿಸ್ ನೀಡಿದೆ. ಈ ವಿಷಯವನ್ನು ಸ್ವಯಂ ಪ್ರೇರಿತವಾಗಿ ಪರಿಗಣಿಸಿರುವ ಆಯೋಗವು ಈ ಬಗ್ಗೆ ರಾಜಸ್ಥಾನ ಸರ್ಕಾರದಿಂದ ಉತ್ತರವನ್ನು ಕೇಳಿದೆ.
8 ರಿಂದ 18 ವರ್ಷದೊಳಗಿನ ಹೆಣ್ಣು ಮಕ್ಕಳನ್ನು ಸ್ಟಾಂಪ್ ಪೇಪರ್ ಮೇಲೆ ಮಾರಾಟ ಮಾಡಲಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗ್ತಿದೆ. ಅಷ್ಟೇ ಅಲ್ಲ, ಹೆಣ್ಣು ಮಕ್ಕಳನ್ನು ಮಾರಲು ಮುಂದಾಗದ ಕುಟುಂಬದ ಮಹಿಳೆಯರ ಮೇಲೆ ಪಂಚಾಯ್ತಿ ಆದೇಶದ ಮೇರೆಗೆ ಅತ್ಯಾಚಾರವೆಸಗಿದ್ದಾರೆ ಎನ್ನಲಾಗ್ತಿದೆ. ಈ ಸುದ್ದಿ ನಿಜವಾಗಿದ್ದರೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಈ ವಿಚಾರದಲ್ಲಿ ಈವರೆಗೆ ಕೈಗೊಂಡಿರುವ ಕ್ರಮದ ಬಗ್ಗೆ ಸರ್ಕಾರದಿಂದ ಮಾಹಿತಿ ಕೇಳಲಾಗಿದೆ.
ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದ ಘಟನೆ:ಪ್ರಕರಣದಕುರಿತು ಪ್ರತಿಕ್ರಿಯಿಸಿದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಈ ಬಗ್ಗೆ ತನಿಖೆ ನಡೆಸಲು ತಂಡಗಳನ್ನು ನಿಯೋಜಿಸಲಾಗಿದೆ. ತಪ್ಪು ಮಾಡಿದವರು ಯಾರೇ ಆಗಲಿ ಅವರನ್ನು ಬಿಡುವ ಮಾತೇ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಬಿಜೆಪಿ ಅಧಿಕಾರದಲ್ಲಿದ್ದಾಗ 2005ರ ಘಟನೆ ಎಂದು ಹೇಳಿದ್ದಾರೆ. 2019ರಲ್ಲಿ ನಾವು ಬಂದು ಅದನ್ನು ಬಹಿರಂಗಪಡಿಸಿದ್ದೇವೆ. 21 ಆರೋಪಿಗಳನ್ನು ಬಂಧಿಸಲಾಗಿದ್ದು, 3 ಮಂದಿ ಮೃತಪಟ್ಟಿದ್ದು, ಓರ್ವ ತಲೆಮರೆಸಿಕೊಂಡಿದ್ದಾನೆ. ಪ್ರಕರಣದಲ್ಲಿ 2 ಮಕ್ಕಳು ಸಾವನ್ನಪ್ಪಿದ್ದು, ಉಳಿದವರು ತಮ್ಮ ಮನೆಗೆ ತೆರಳಿದ್ದಾರೆ ಎಂದು ಹೇಳಿದ್ದಾರೆ.
ವರದಿಯ ಪ್ರಕಾರ ನೂರಾರು ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆಗಾಗಿ ವಿವಿಧ ರಾಜ್ಯಗಳಿಗೆ ಮಾರಾಟ ಮಾಡಲಾಗಿದೆ. ವೇಶ್ಯಾವಾಟಿಕೆಗಾಗಿ ತನ್ನನ್ನು 10 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ ಎಂದು ಅಪ್ರಾಪ್ತ ಬಾಲಕಿಯೊಬ್ಬಳು ತಿಳಿಸಿದ್ದಾಳೆ. ಇದೇ ವೇಳೆ ನಿರುದ್ಯೋಗ, ಬಡತನದ ಜತೆಗೆ ಸಮಾಜದಲ್ಲಿ ಹರಡುವ ದುಶ್ಚಟಗಳಿಗೆ ಭಾರಿ ದಂಡ ತೆರಲು ಹೆಣ್ಣುಮಕ್ಕಳೊಂದಿಗೆ ವ್ಯವಹರಿಸುತ್ತಾರೆ ಎಂದು ಗ್ರಾಮದ ಜನಪ್ರತಿನಿಧಿ ತಿಳಿಸಿದರು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ನಂತರ ಇದೀಗ ರಾಜ್ಯ ಮಹಿಳಾ ಮತ್ತು ಮಕ್ಕಳ ರಕ್ಷಣಾ ಆಯೋಗವೂ ಈ ವಿಷಯದ ಬಗ್ಗೆ ಗಮನಹರಿಸಿದೆ. ರಾಜಸ್ಥಾನದ ಭಿಲ್ವಾರಾದಲ್ಲಿ ಬಾಲಕಿಯರೊಂದಿಗೆ ನಡೆದ ಈ ಘಟನೆಯ ಕುರಿತು ಮಹಿಳಾ ಆಯೋಗವು ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ನೋಟಿಸ್ ಜಾರಿ ಮಾಡಿದ್ದು ಉತ್ತರ ಕೇಳಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೆಹನಾ ರಿಯಾಜ್, ಪ್ರಕರಣವನ್ನು ಯಾವುದೇ ಸಂದರ್ಭದಲ್ಲೂ ಸಹಿಸುವುದಿಲ್ಲ ಮತ್ತು ಈ ಘಟನೆಯಲ್ಲಿ ಭಾಗಿಯಾಗಿರುವ ಎಲ್ಲಾ ಪಾಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.