ಕರ್ನಾಟಕ

karnataka

ETV Bharat / bharat

ಶಿಕ್ಷಕರನ್ನು ‘Frontline Corona warriors' ಎಂದು ಪರಿಗಣಿಸಿ: NHRC - ಸುಪ್ರೀಂಕೋರ್ಟ್ ವಕೀಲ ರಾಧಾಕೃಷ್ಣ ತ್ರಿಪಾಠಿ

ಕೋವಿಡ್​ ಸಂದರ್ಭದಲ್ಲಿ ಕೆಲಸ ನಿರ್ವಹಿಸಿ ತೊಂದರೆಗೆ ಒಳಪಡುವ ಶಿಕ್ಷಕರಿಗೆ ಶೀಘ್ರವೇ ಸೂಕ್ತ ವಿಮೆ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು. ಇತರ ಕೊರೊನಾ ವಾರಿಯರ್ಸ್​ಗೆ ಸಿಗುವಂತೆಯೇ ಎಲ್ಲ ಸೌಲಭ್ಯಗಳು ಇವರಿಗೂ ದೊರಕುವಂತೆ ನೋಡಿಕೊಳ್ಳಬೇಕು ಎಂದು ಎಲ್ಲಾ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ NHRC ನಿರ್ದೇಶನ ನೀಡಿದೆ.

NHRC
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ

By

Published : Jun 19, 2021, 8:06 PM IST

ನವದೆಹಲಿ: ಕೋವಿಡ್​ ಕರ್ತವ್ಯದಲ್ಲಿ ನಿರತರಾಗಿರುವ ಶಿಕ್ಷಕರನ್ನು ಕೊರೊನಾ ಫ್ರಂಟ್​ಲೈನ್​ ವಾರಿಯರ್ಸ್​ ಎಂದು ಪರಿಗಣಿಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಎಲ್ಲ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.

ಅಲ್ಲದೇ, ಕೋವಿಡ್​ ಸಂದರ್ಭದಲ್ಲಿ ಕೆಲಸ ನಿರ್ವಹಿಸಿ ತೊಂದರೆಗೆ ಒಳಪಡುವ ಶಿಕ್ಷಕರಿಗೆ ಶೀಘ್ರವೇ ಸೂಕ್ತ ವಿಮೆ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು. ಇತರ ಕೊರೊನಾ ವಾರಿಯರ್ಸ್​ಗೆ ಸಿಗುವಂತೆಯೇ ಎಲ್ಲ ಸೌಲಭ್ಯಗಳು ಇವರಿಗೂ ದೊರಕಬೇಕು ಎಂದು ಆಯೋಗ ಸೂಚನೆ ನೀಡಿದೆ.

ಈ ಬಗ್ಗೆ ಮಾನವ ಹಕ್ಕುಗಳ ಹೋರಾಟಗಾರ ಹಾಗೂ ಸುಪ್ರೀಂಕೋರ್ಟ್ ವಕೀಲ ರಾಧಾಕೃಷ್ಣ ತ್ರಿಪಾಠಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ಆಯೋಗ, ಈ ನಿರ್ದೇಶನವನ್ನು ನೀಡಿದೆ. ಒಡಿಶಾದ ಗಂಜಮ್​ ಜಿಲ್ಲೆಯಲ್ಲಿ ಕೋವಿಡ್​ ಕರ್ತವ್ಯ ನಿರತ ಶಿಕ್ಷಕ ಸಿಮಂಚಲ್​ ಸತ್ಪತಿ ಎನ್ನುವವರು ಜುಲೈ 3, 2020ರಲ್ಲಿ ಮೃತಪಟ್ಟಿದ್ದು, ಈವರೆಗೆ ಅವರ ಕುಟುಂಬಕ್ಕೆ ಯಾವುದೇ ಪರಿಹಾರ ಲಭಿಸಿಲ್ಲ.

ಶಿಕ್ಷಕ ಸಿಮಂಚಲ್​ ಸತ್ಪತಿ (27 ವರ್ಷ) ನಿಧನದ ನಂತರ ಅವರ ತಂದೆ ರಾಜ್​ಕಿಶೋರ್ ಸತ್ಪತಿ ಹಾಗೂ ತಾಯಿ ಸುಲೋಚನಾ ಸತ್ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ದೇಶದಲ್ಲಿ ಇಂತಹ ಹಲವು ಘಟನೆಗಳಿವೆ ಎಂದು ಉದಾಹರಣೆ ನೀಡಿದ ಅರ್ಜಿದಾರರು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದ್ದರು.

ದೇಶದ ವಿವಿಧೆಡೆ ಇಂತಹ ಹಲವು ದುರ್ಘಟನೆಗಳು ನಡೆದಿವೆ. ಬೇರೆ ಬೇರೆ ಕಡೆ ನಡೆದ ಚುನಾವಣೆಗಳಲ್ಲೂ ಶಿಕ್ಷಕರನ್ನು ಕರ್ತವ್ಯಕ್ಕೆ ಬಳಸಿಕೊಳ್ಳಲಾಗಿತ್ತು. ಉತ್ತರ ಪ್ರದೇಶವೊಂದರಲ್ಲೇ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ನೂರಾರು ಶಿಕ್ಷಕರು ಸೋಂಕಿಗೆ ತುತ್ತಾಗಿ ಕಷ್ಟ ಅನುಭವಿಸಿದರು.

ಶಿಕ್ಷಕರಿಗೆ ಬೋಧನೆಯ ಹೊರತಾಗಿ ಸಾಕಷ್ಟು ಜವಾಬ್ದಾರಿ ನೀಡುವುದರಿಂದ ಅವರು ಮನೆಮನೆಗೆ ತೆರಳಿ ಕರ್ತವ್ಯ ನಿರ್ವಹಿಸುವ ಸ್ಥಿತಿಯೂ ಇದೆ. ಕೊರೊನಾ ಸಂದರ್ಭದಲ್ಲಿ ಶಿಕ್ಷಕರು ಅಪಾಯದ ಸುಳಿಯಲ್ಲೇ ಸಿಲುಕಿಕೊಂಡಿದ್ದಾರೆ. ಹೀಗಾಗಿ ಅವರನ್ನು ಕೊರೊನಾ ಫ್ರಂಟ್​ ಲೈನ್ ವಾರಿಯರ್ಸ್​ ಎಂದು ಪರಿಗಣಿಸಬೇಕು ಎಂದು ಮಾನವ ಹಕ್ಕುಗಳ ಆಯೋಗವನ್ನು ಒತ್ತಾಯಿಸಿದ್ದರು.

ಇದನ್ನೂ ಓದಿ:ಜೂನ್ 21 ರಂದು ವ್ಯಾಕ್ಸಿನೇಷನ್​ ಜಾಗೃತಿ ಅಭಿಯಾನ : ಕೇಂದ್ರ ಸಚಿವ ನಖ್ವಿ

ಯುನೆಸ್ಕೋ ಹಾಗೂ ಕೆಲ ರಾಜ್ಯಗಳ ಸಾಂವಿಧಾನಿಕ ಸಂಸ್ಥೆಗಳು ಶಿಕ್ಷಕರನ್ನು ಆದ್ಯತೆಯ ಮೇರೆಗೆ ಗುರುತಿಸಿವೆ. ಆದರೆ, ಇದು ಎಲ್ಲಾ ಶಿಕ್ಷಕರಿಗೂ ಅನ್ವಯಿಸಬೇಕು. ಅವರಿಗೆ ವೈದ್ಯಕೀಯ ಸೌಲಭ್ಯಗಳು ಸಿಗಬೇಕು. ಹೆಚ್ಚಿನ ಕಡೆಗಳಲ್ಲಿ ಶಿಕ್ಷಕ ವೃತ್ತಿಯಲ್ಲಿರುವವರೇ ಇಡೀ ಮನೆಗೆ ಆಧಾರವಾಗಿರುತ್ತಾರೆ.

ಆದ್ದರಿಂದ ಅವರಿಗೆ ಎಲ್ಲ ರೀತಿಯ ಸುರಕ್ಷತೆಗಳನ್ನು ಒದಗಿಸುವ ಅವಶ್ಯಕತೆ ಇದೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು. ಇದನ್ನು ಮೌಲ್ಯಯುತ ವಿಚಾರ ಎಂದು ಪರಿಗಣಿಸಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೋವಿಡ್​ ಕರ್ತವ್ಯದಲ್ಲಿ ನಿರತರಾಗಿರುವ ಶಿಕ್ಷಕರನ್ನು ಕೊರೊನಾ ಫ್ರಂಟ್​ಲೈನ್​ ವಾರಿಯರ್ಸ್​ ಎಂದು ಪರಿಗಣಿಸಲು ಎಲ್ಲಾ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದೆ. ತೊಂದರೆಗೀಡಾಗಿರುವ ಶಿಕ್ಷಕರು ದೂರು ನೀಡಿದ ಎಂಟು ವಾರಗಳೊಳಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆಯೂ ಉಲ್ಲೇಖಿಸಿದೆ.

ABOUT THE AUTHOR

...view details