ಗುವಾಹಟಿ : ರೈಲ್ವೇ ಹಳಿಯಲ್ಲಿ ಆನೆ ಮತ್ತು ರೈಲುಗಳ ನಡುವಿನ ಅಪಘಾತಗಳಿಗೆ ಕಡಿವಾಣ ಹಾಕಲು ಈಶಾನ್ಯ ಗಡಿನಾಡ ರೈಲ್ವೆ ಮುಂದಾಗಿದೆ. ಈ ಸಂಬಂಧ ಕೃತಕ ಬುದ್ಧಿಮತ್ತೆ ಆಧಾರಿತ ಒಳನುಗ್ಗುವಿಕೆ ಪತ್ತೆ ವ್ಯವಸ್ಥೆ (ಐಡಿಎಸ್) ಅಳವಡಿಸುವ ನಿಟ್ಟಿನಲ್ಲಿ ಈಶಾನ್ಯ ಗಡಿನಾಡ ರೈಲ್ವೆಯು ರೈಲ್ಟೆಲ್ ಕಾರ್ಪೋರೇಷನ್ ಆಫ್ ಇಂಡಿಯಾದ ಜೊತೆ ಒಪ್ಪಂದ ಮಾಡಿಕೊಂಡಿದೆ. ಸೋಮವಾರ ಅಸ್ಸಾಂನ ಗುವಾಹಟಿಯ ಮಾಲಿಗಾಂವ್‌ನಲ್ಲಿ ಎನ್‌ಎಫ್‌ಆರ್ ಜನರಲ್ ಮ್ಯಾನೇಜರ್ ಅನ್ಶುಲ್ ಗುಪ್ತಾ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಈ ಬಗ್ಗೆ ಮಾಹಿತಿ ನೀಡಿರುವ ಈಶಾನ್ಯ ಗಡಿ ರೈಲ್ವೆ ಸಿಪಿಆರ್ಓ ಸಬ್ಯಸಾಚಿ, "ನಾವು ಕಾಡು ಪ್ರಾಣಿಗಳು ರೈಲ್ವೇ ಹಳಿಗಳ ಬಳಿ ಬರುವುದನ್ನು ತಡೆಯಲು ಹಲವು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ವಿಶೇಷವಾಗಿ ಆನೆಗಳು ರೈಲ್ವೇ ಹಳಿಗಳ ಬಳಿ ಬರುವುದನ್ನು ಮತ್ತು ಇರುವುದನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳುತ್ತಿದ್ದೇವೆ. ಕೃತಕ ಬುದ್ಧಿ ಮತ್ತೆ ಆಧಾರಿತ ಐಡಿಎಸ್ ಅಳವಡಿಸುವುದು ನಮ್ಮ ಪ್ರಮುಖ ಕಾರ್ಯಗಳಲ್ಲಿ ಒಂದು" ಎಂದು ಹೇಳಿದರು.
ಪ್ರಾಯೋಗಿಕ ಪರೀಕ್ಷೆ ಯಶಸ್ವಿ:ಪಶ್ಚಿಮ ಬಂಗಾಳದ ಅಲಿಪುರ್ದುವಾರ್ ವಿಭಾಗದ ಡೋರ್ಸ್ ಪ್ರದೇಶದ ಚಲ್ಸಾ-ಹಸಿಮಾರಾದಲ್ಲಿ ಮತ್ತು ಅಸ್ಸಾಂನ ಲುಮ್ಡಿಂಗ್ ವಿಭಾಗದ ಲಂಕಾ-ಹವಾಯಿಪುರ ವಿಭಾಗದಲ್ಲಿ ಕೈಗೊಂಡ ಐಡಿಎಸ್ನ ಪ್ರಾಯೋಗಿಕ ಯೋಜನೆ ಯಶಸ್ಸು ಕಂಡಿದೆ. ಈ ಹಿನ್ನೆಲೆಯಲ್ಲಿ ಈ ವ್ಯವಸ್ಥೆಯನ್ನು ಕ್ರಮೇಣ ಈಶಾನ್ಯ ಗಡಿನಾಡು ರೈಲ್ವೇ ವ್ಯಾಪ್ತಿಯ ಎಲ್ಲಾ ಆನೆ ಕಾರಿಡಾರ್ಗಳಲ್ಲಿ ಸ್ಥಾಪಿಸಲು ನಿರ್ಧರಿಸಿರುವುದಾಗಿ ಎನ್‌ಎಫ್‌ಆರ್ ಜನರಲ್ ಮ್ಯಾನೇಜರ್ ಅನ್ಶುಲ್ ಗುಪ್ತಾ ತಿಳಿಸಿದರು.