ನವದೆಹಲಿ: ಮಹಾಮಾರಿ ಕೊರೊನಾ ವೈರಸ್ 2ನೇ ಅಲೆ ದೇಶದಲ್ಲಿ ಮೀತಿ ಮೀರಿದ್ದು, ಇದರಿಂದ ಜನರು ಈ ಹಿಂದಿಗಿಂತಲೂ ಅತಿ ಹೆಚ್ಚು ಸಂಖ್ಯೆಯಲ್ಲಿ ಸೋಂಕಿತರಾಗುತ್ತಿದ್ದಾರೆ. ಇದೇ ವಿಷಯವಾಗಿ ಕೇಂದ್ರ ಆರೋಗ್ಯ ಇಲಾಖೆ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿತು.
ಮಹಾರಾಷ್ಟ್ರ, ಪಂಜಾಬ್, ಛತ್ತೀಸ್ಗಢ, ಕರ್ನಾಟಕ ಸೇರಿದಂತೆ ಕೆಲವೊಂದು ರಾಜ್ಯಗಳಲ್ಲಿ ಮಹಾಮಾರಿ ಅಬ್ಬರ ಜೋರಾಗಿದ್ದು, ಮುಂದಿನ ನಾಲ್ಕು ವಾರ ಭಾರತಕ್ಕೆ ಬಹಳ ನಿರ್ಣಾಯಕವಾಗಲಿದೆ ಎಂದಿದೆ.
ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ದೇಶದಲ್ಲಿ 10 ಜಿಲ್ಲೆಗಳಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳಿದ್ದು, ಅದರಲ್ಲಿ ಮಹಾರಾಷ್ಟ್ರದ ಏಳು ಹಾಗೂ ಕರ್ನಾಟಕ, ಛತ್ತೀಸಗಢ ಮತ್ತು ದೆಹಲಿ ತಲಾ ಒಂದು ಜಿಲ್ಲೆಯಲ್ಲಿ ಇದರ ಹಾವಳಿ ಜೋರಾಗಿದೆ ಎಂದರು. ದೇಶದಲ್ಲಿ ಅತಿ ಹೆಚ್ಚು ಆರ್ಟಿ - ಪಿಸಿಆರ್ ಟೆಸ್ಟ್ ಮಾಡಿಸುವಂತೆ ಸೂಚನೆ ನೀಡಲಾಗಿದ್ದು, ಮಹಾರಾಷ್ಟ್ರದಲ್ಲಿ ಕೇವಲ ಶೇ.60ರಷ್ಟು ಟೆಸ್ಟಿಂಗ್ ಆಗಿವೆ ಎಂದರು. ಪಂಜಾಬ್ ಹಾಗೂ ಛತ್ತೀಸ್ಗಢದಲ್ಲಿ ಹೆಚ್ಚಿನ ಸಾವು ಪ್ರಕರಣ ದಾಖಲಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದರು.