ಬೋಲ್ಪುರ್ (ಪಶ್ಚಿಮ ಬಂಗಾಳ;):ನವವಿವಾಹಿತೆ ಮತ್ತು ಆಕೆಯ ಮಾಜಿ ಪ್ರೇಮಿ ಸೋಮವಾರ ಯುವತಿಯ ಪೋಷಕರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ತಪ್ಪಿಸಿಕೊಳ್ಳುವ ಭರದಲ್ಲಿ ನವವಿವಾಹಿತೆಯ ಮಾಜಿ ಪ್ರಿಯಕರ, ಹುಡುಗಿಯ ತಂದೆ ಮೇಲೆ ಕಾರು ಹತ್ತಿಸಿ ಪರಾರಿ ಆಗಿದ್ದಾನೆ. ನವವಿವಾಹಿತೆ ಮತ್ತು ಮಾಜಿ ಪ್ರಿಯಕರ ಮಾಡಿದ ಈ ಅವಾಂತರದಿಂದ ಯುವತಿಯ ತಂದೆ ಮೃತ ಪಟ್ಟಿದ್ದಾರೆ. ಈ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಘಟನೆಯ ಹಿನ್ನೆಲೆ ಏನು?:ನವ ವಿವಾಹಿತೆ ಮದುವೆಗೆ ಮೊದಲೇ ಬೋಲ್ಪುರದ ಇನ್ನೊಬ್ಬ ವ್ಯಕ್ತಿಯೊಂದಿಗೆ ಪ್ರೀತಿಯ ಬಲೆಗೆ ಬಿದ್ದಿದ್ದಳು. ಆದರೆ ಈ ಪ್ರೀತಿಗೆ ಯುವತಿಯ ಮನೆಯವರ ವಿರೋಧ ಇತ್ತು. ಪ್ರೀತಿಸಿದ ಹುಡುಗನೊಂದಿಗೆ ಮದುವೆ ಮಾಡಿಕೊಡಲು ಪೋಷಕರು ನಿರಾಕರಿಸಿದ್ದರು. ಮಗಳು ದಾರಿ ತಪ್ಪಬಾರದು ಎಂಬ ಉದ್ದೇಶದಿಂದ ಮತ್ತೊಂದು ಗಂಡು ನೋಡಿ ಮಗಳಿಗೆ ಮದುವೆ ಮಾಡಿಸಿದ್ದರು. ಪೋಷಕರ ಒತ್ತಾಯದ ಮೇರೆಗೆ ಯುವತಿ ಬೇರೆ ಯುವಕನೊಂದಿಗೆ ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡಿದ್ದಳು. ಹೆತ್ತವರ ಆಸೆಯಂತೆ ಅವರು ನೋಡಿದ ಗಂಡಿನೊಂದಿಗೆ ಮದುವೆ ಆಗಿದ್ದಳು.
ಹೀಗೆ ಅದ್ದೂರಿ ಮದುವೆ ಆಗಿ ಎಂಟು ದಿನಗಳ ನಂತರ 'ಅಷ್ಟಮಂಗಲ'ದ ಶುಭ ಸಂದರ್ಭದಲ್ಲಿ, ಯುವತಿ ತನ್ನ ಪತಿಯೊಂದಿಗೆ ಪೋಷಕರ ಮನೆಗೆ ವಾಪಸ್ ಆಗಿದ್ದಳು. ಮದುವೆ ಆಗಿ ತಂದೆ -ತಾಯಿ ಮನೆಗೆ ಆಗಮಿಸಿದ ಸುದ್ದಿ ತಿಳಿದ ನವವಿವಾಹಿತೆಯ ಮಾಜಿ ಪ್ರಿಯಕರ, ಆಕೆಯ ಮನೆಗೆ ಬಂದು ಅವಳನ್ನ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದ. ಹೀಗೆ ಕದ್ದು ಮುಚ್ಚಿ ಓಡಾಡುವುದು ಪೋಷಕರ ಕಣ್ಣಿಗೆ ಬಿದ್ದಿದೆ. ತಕ್ಷಣವೇ ತಂದೆ ಇದನ್ನು ತಡೆಯಲು ಮುಂದಾಗಿದ್ದಾರೆ. ಮಗಳಿಗೆ ಛೀಮಾರಿ ಹಾಕಿ ಮನೆಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದಾರೆ. ಆದರೆ ಮಗಳು ತಂದೆ ಮಾತು ಕೇಳದೆ, ಬರಲು ಒಪ್ಪದೇ ಹಠ ಹಿಡಿದಿದ್ದಾಳೆ.