ಗೋಪಾಲ್ಗಂಜ್(ಬಿಹಾರ): ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿಯೊಂದು ಮೊದಲ ರಾತ್ರಿಯೇ(ಫಸ್ಟ್ನೈಟ್) ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಿಹಾರದ ಗೋಪಾಲ್ಗಂಜ್ನಲ್ಲಿ ನಡೆದಿದೆ. ಈ ಜೋಡಿ ಪರಸ್ಪರ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು.
ಆತ್ಮಹತ್ಯೆಗೆ ಯತ್ನಿಸಿರುವ ಈ ಜೋಡಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯಾವ ಕಾರಣಕ್ಕಾಗಿ ಜೋಡಿ ಆತ್ಮಹತ್ಯೆಗೆ ಯತ್ನಿಸಿದೆ ಎಂಬ ಮಾಹಿತಿ ಇಲ್ಲಿಯವರೆಗೆ ಲಭ್ಯವಾಗಿಲ್ಲ. ಜಮ್ಶೆಡ್‌ಪುರದ ನಿವಾಸಿ ಶಾಂತಿ ಹಾಗೂ ಗೋಪಾಲ್ಗಂಜ್ನ ಮುಖೇಶ್ ಪರಸ್ಪರ ಪ್ರೀತಿಸಿ ಥಾವೆ ದೇವಸ್ಥಾನದಲ್ಲಿ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಮದುವೆ ನಂತರ ಹುಡುಗನ ಮನೆಯಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಊಟ ಮಾಡಿದ ಬಳಿಕ ಇಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಕುಟುಂಬ ಸದಸ್ಯರು ತಿಳಿಸಿರುವ ಪ್ರಕಾರ ಇಬ್ಬರು ಚಿಕನ್ ಊಟದಲ್ಲಿ ವಿಷ ಬೆರೆಸಿ ತಿಂದಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ: ರಾಜ್ಯದಲ್ಲಿ ಡೆಲ್ಟಾ ಆಯ್ತು, ಇದೀಗ 'ಡೆಲ್ಟಾ ಪ್ಲಸ್' ವೈರಸ್ ಪತ್ತೆ!
ಕೊಠಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇಬ್ಬರನ್ನ ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಈಗಾಗಲೇ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಕಾರಣ ಯಾವುದೇ ರೀತಿಯ ಹೇಳಿಕೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಘಟನೆಗೆ ಸಂಬಂಧಿಸಿದಂತೆ ಎರಡು ಕುಟುಂಬದ ಸದಸ್ಯರ ಹೇಳಿಕೆ ಪಡೆದುಕೊಳ್ಳಲಾಗಿದೆ.